ಬೆಂಗಳೂರು: ಬೆಂಬಲ ಬೆಲೆಯಲ್ಲಿ ರಾಗಿ ಮತ್ತು ಭತ್ತ ಖರೀದಿ ಪ್ರಮಾಣ ಮತ್ತು ಬೆಂಬಲ ಬೆಲೆ ಪರಿಷ್ಕರಿಸಿ ಹೆಚ್ಚಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಆಹಾರ ಸಚಿವ ಉಮೇಶ್ ಕತ್ತಿ ಅವರನ್ನು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಈ ಸಂಬಂಧ ಪತ್ರ ಬರೆದಿರುವ ಅವರು, ಪ್ರತಿ ವರ್ಷದಂತೆ ರೈತರ ಬೆಂಬಲಕ್ಕೆ ಸರ್ಕಾರ ಧಾವಿಸಬೇಕಿದೆ. ಈ ವರ್ಷ ಅತಿವೃಷ್ಟಿ, ಕೊರೊನಾ ಸಂಕಷ್ಟ ಸೇರಿದಂತೆ ನಾನಾ ಕಾರಣಗಳಿಂದ ರೈತರ ಬದುಕು ದುಸ್ತರವಾಗಿದೆ. ಇಂತಹ ವಿಷಮ ಪರಿಸ್ಥಿತಿಯ ನಡುವೆಯೂ ರಾಗಿ ಬೆಳೆಯನ್ನು ರೈತರು ಕಷ್ಟಪಟ್ಟು ಬೆಳೆದಿದ್ದಾರೆ. ಆದರೆ, ಸರ್ಕಾರವು ಪ್ರಸ್ತುತ ಸಾಲಿನಲ್ಲಿ ನಿಗದಿಪಡಿಸಿರುವ ರಾಗಿ ಮತ್ತು ಭತ್ತದ ಖರೀದಿ ಪ್ರಮಾಣವು ರೈತರಿಗೆ ಮುಳುವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸುವುದು ಅವಶ್ಯ.
ಕಳೆದ ವರ್ಷ 47.53 ಲಕ್ಷ ಕ್ವಿಂಟಲ್ ರಾಗಿಯನ್ನು ಒಟ್ಟು 2,06,722 ರೈತರಿಂದ ಪ್ರತಿ ಕ್ವಿಂಟಲ್ಗೆ ರೂ.3,295ರಂತೆ (ಪ್ರತಿ ರೈತರಿಂದ ಗರಿಷ್ಠ 75 ಕ್ವಿಂಟಲ್ ಮಿತಿ ನಿಗದಿಪಡಿಸಿ) ಖರೀದಿ ಮಾಡಲಾಗಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಒಂದು ಎಕರೆಗೆ 10 ಕ್ವಿಂಟಲ್ನಂತೆ ಅಥವಾ ಒಬ್ಬ ರೈತನಿಂದ 20 ಕ್ವಿಂಟಲ್‌ವರೆಗೆ ಮಾತ್ರ ಬೆಂಬಲ ಬೆಲೆಯಡಿ ಖರೀದಿ ಮಾಡುವಂತೆ ಸರ್ಕಾರ ಆದೇಶಿಸಿದೆ.