ಬೆಂಗಳೂರು:ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಸ್ಥಾನ ಕೈ ತಪ್ಪಿದ್ದಕ್ಕೆ, ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದಾಗಿ ಉಪಚುನಾವಣೆ ಪ್ರಚಾರದಲ್ಲಿ ನಾನು ಪಾಲ್ಗೊಂಡಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಪರಿಷತ್ನಲ್ಲಿ ನಾನು ಹಿರಿಯ ನಾಯಕನಿದ್ದೇನೆ. ಆದರೂ ಕೂಡ ನನಗೆ ವಿಪಕ್ಷ ಸ್ಥಾನಕ್ಕೆ ಅವಕಾಶ ಕೊಡಲಿಲ್ಲ. ನಾವು ದುಡಿದು ಓಟು ಹಾಕಿಸಬೇಕು, ಆದರೆ ನಿರ್ಧಾರ ತಗೋಳೊದ್ರಲ್ಲಿ ನಾವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿರೋಧ ಮಾಡೋದು ನಾವು, ಭಾಷಣ ಮಾಡೋದು ನಾವು, ವಿರೋಧ ಕಟ್ಕೊಳ್ಳೋದು ನಾವು, ಅಧಿಕಾರ ಅನುಭವಿಸೋದಕ್ಕೆ ಖುರ್ಚಿ ಮೇಲೆ ಕೂರುವುದಕ್ಕೆ ಬೇರೆಯವರಾ ಎಂದು ಪ್ರಶ್ನೆ ಮಾಡಿದರು.
ಸತ್ತಿದ್ದೀವಿ ಅಂದ ಮೇಲೆ ಶವ ಸಂಸ್ಕಾರನಾದರೂ ಮಾಡಬೇಕಲ್ಲ, ಶವ ಸಂಸ್ಕಾರವೂ ಮಾಡದೇ ಸರ್ಕಲ್ನಲ್ಲಿ ಶವ ಬಿಸಾಡಿದ್ದಾರೆ. ಎಷ್ಟು ದಿನ ಅಂತ ದುಡಿಯೋದು ಎಂದು ಕೇಳಿದರು.
ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ಹೈಕಮಾಂಡ್ ಅಲ್ಪ ಸಂಖ್ಯಾತ ಸಮುದಾಯದ ಕೈ ಹಿಡಿಲಿಲ್ಲ. ಕೆ.ಸಿ. ವೇಣುಗೋಪಾಲ್ ನಮ್ಮ ಪರವಾಗಿ ಮಾತನಾಡಬಹುದಿತ್ತು. ಕಾಂಗ್ರೆಸ್ ನಾಯಕರೂ ಯಾರೂ ಮಾತನಾಡಲೇ ಇಲ್ಲ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ವಿರುದ್ಧ ನನ್ನ ಸಿಟ್ಟಲ್ಲ, ಕಾಂಗ್ರೆಸ್ ಪಕ್ಷದ ವಿರುದ್ಧ ನನ್ನ ಸಿಟ್ಟು ಎಂದರು.
ಅಲ್ಪಸಂಖ್ಯಾತ ಸಮಾಜ ಶೇ. 15 - 16 ರಷ್ಟು ಇದೆ. ಅಲ್ಪಸಂಖ್ಯಾತ ಸಮಾಜ ಬೇರೆಯವರ ಜೊತೆಗೆ ಗುರುತಿಸಿಕೊಂಡಿದೆ. ಅನೇಕ ಕಡೆ ಯಡಿಯೂರಪ್ಪನವರಿಗೆ ಅಲ್ಪಸಂಖ್ಯಾತ ಸಮಾಜ ಮತ ಹಾಕಿದೆ ಎಂದರು.