ಬೆಂಗಳೂರು: "ಕಾಂಗ್ರೆಸ್ನಲ್ಲಿ ಭವಿಷ್ಯ ಇಲ್ಲ. ಅಲ್ಲೇ ಇದ್ದಿದ್ದರೆ ನನ್ನ ಭವಿಷ್ಯ ಹಾಳಾಗುತ್ತಿತ್ತು" ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು. ವಿಧಾನಸೌಧದಲ್ಲಿ ಇಂದು ವಿಧಾನ ಪರಿಷತ್ ನೂತನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಗೆ ಬಂದು ಬೆಳೆಯುತ್ತಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿರುವ ನನ್ನ ಸ್ನೇಹಿತರು ನನ್ನ ದಾರಿ ಹಿಡಿದರೆ ಸಂತೋಷಪಡುತ್ತೇನೆ. ಸ್ವಾಗತ ಕೋರುವುದಾಗಿ ಸಂದೇಶ ಕೊಡುತ್ತಿದ್ದೇನೆ" ಎಂದರು.
"1977-78ರಿಂದಲೂ ನಾನು ರಾಜಕಾರಣಿ. ನಾನು ಬಹಳ ವರ್ಷ ಕಾಂಗ್ರೆಸ್ನಲ್ಲಿ ದುಡಿದಿದ್ದೇನೆ. ಅಲ್ಲಿ ಪ್ರಮುಖ ನಾಯಕರ ಕುಟುಂಬಕ್ಕೆ ಮಾತ್ರ ಅವಕಾಶ. ಕಾಂಗ್ರೆಸ್ನಲ್ಲಿ ವಂಚನೆಗೆ ಒಳಗಾಗಿದ್ದೆ ಎಂದು ಆರೋಪಿಸಿದ ಅವರು, ಈಗ ಬಿಜೆಪಿ ನನಗೆ ಸೂಕ್ತ ಸ್ಥಾನ ನೀಡಿದೆ" ಎಂದು ಕೃತಜ್ಞತೆ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, "ಜೆಡಿಎಸ್ನ ಹಿರಿಯರು ಎಲ್ಲರೂ ಸೇರಿ ನನ್ನ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿ ನೀಡಿದ್ದಾರೆ. ಎರಡನೇ ಬಾರಿಗೆ ಪರಿಷತ್ ಸದಸ್ಯನಾಗಿ ಕೆಲಸ ಮಾಡುವ ಅವಕಾಶ ಕೊಟ್ಟಿದ್ದಾರೆ. ಅವಕಾಶ ಸದ್ಭಳಕೆ ಮಾಡಿಕೊಂಡು ಜನಸೇವೆ ಮಾಡುತ್ತೇನೆ" ಎಂದು ಹೇಳಿದರು.