ಬೆಂಗಳೂರು: ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರಿಗೆ ಕ್ಷೇತ್ರಾಭಿವೃದ್ಧಿ ಯೋಜನೆ ಅನುದಾನವೇ ಪ್ರಮುಖ ಅನುದಾನವಾಗಿದೆ. ಇನ್ನೇನು 2022-23 ಬಜೆಟ್ ವರ್ಷ ಮುಕ್ತಾಯದ ಅಂಚಿನಲ್ಲಿದ್ದು, ಕ್ಷೇತ್ರಾಭಿವೃದ್ಧಿ ಯೋಜನೆ ಪ್ರಗತಿ ಕಾಣುವಲ್ಲಿ ಹಿಂದೆ ಬಿದ್ದಿದೆ. ಅನುದಾನ ಮಂಜೂರಾದರೂ ಅದನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಕೆ ಮಾಡುವಲ್ಲಿ ಶಾಸಕರ ನಿರಾಸಕ್ತಿ ಮುಂದುವರಿದಿದೆ.
ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (ಶಾಸಕರ ನಿಧಿ) ಯಡಿ ಸಿಗುವ ನಿಧಿಯು ಪ್ರತಿ ಶಾಸಕರಿಗೆ ಸಿಗುವ ಪ್ರಮುಖ ಅನುದಾನವಾಗಿದೆ. ಕ್ಷೇತ್ರಾಭಿವೃದ್ಧಿ ಯೋಜನೆಯ ಅಡಿ ಶಾಸಕರು ಶಿಫಾರಸು ಮಾಡುವ ಯೋಜನೆಗಳಿಗೆ ಜಿಲ್ಲಾಧಿಕಾರಿ ಖಾತೆಯಿಂದ ಹಣ ಬಿಡುಗಡೆ ಮಾಡಲಾಗುತ್ತದೆ. ಸರ್ಕಾರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ (ಶಾಸಕರ ನಿಧಿ) ವಾರ್ಷಿಕ 2 ಕೋಟಿ ರೂ. ಅನುದಾನ ನೀಡುತ್ತದೆ. ಶಾಸಕರ ನಿಧಿಯ ಅನುದಾನ ನೇರವಾಗಿ ಶಾಸಕರ ಖಾತೆಗೆ ಹೋಗುವುದಿಲ್ಲ. ಆ ಹಣ ಜಿಲ್ಲಾಧಿಕಾರಿಗಳ ಪಿ.ಡಿ. (ವೈಯಕ್ತಿಕ ಠೇವಣಿ) ಖಾತೆಗೆ ಹೋಗುತ್ತದೆ. ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಸಮುದಾಯ ಭವನ, ಗ್ರಾಮೀಣ ರಸ್ತೆ, ಶಾಲೆ, ಕಾಲೇಜು, ಅಂಗನವಾಡಿ ಕಟ್ಟಡ, ಆಸ್ಪತ್ರೆ ಕಟ್ಟಡ, ಚರಂಡಿ, ತುರ್ತು ಕುಡಿಯುವ ನೀರು, ಬೀದಿ ದೀಪ, ಗ್ರಂಥಾಲಯ, ಬಸ್ ತಂಗುದಾಣ ಸೇರಿದಂತೆ ವಿವಿಧ ಜನೋಪಯೋಗಿ ಕೆಲಸಗಳಿಗೆ ಈ ನಿಧಿಯನ್ನು ಬಳಸಬಹುದಾಗಿದೆ. ಹೀಗೆ ಕ್ಷೇತ್ರಾಭಿವೃದ್ಧಿ ಯೋಜನೆಯ ಅಡಿ ಶಾಸಕರು ಶಿಫಾರಸು ಮಾಡುವ ಯೋಜನೆಗಳಿಗೆ ಜಿಲ್ಲಾಧಿಕಾರಿ ಖಾತೆಯಿಂದ ಹಣ ಬಿಡುಗಡೆ ಆಗುತ್ತದೆ.
ಪ್ರತಿ ವರ್ಷ ಜೂನ್ ತಿಂಗಳ ಒಳಗೆ ಎಲ್ಲ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ತಲಾ 2 ಕೋಟಿವರೆಗಿನ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು ಮತ್ತು ಪ್ರಸ್ತಾವಿತ ಕಾಮಗಾರಿಯನ್ನು ಎರಡು ವರ್ಷದ ಒಳಗೆ ಪೂರ್ಣಗೊಳಿಸಬೇಕಾಗಿದೆ. ಆದರೆ ಮಂಜೂರಾದ ಹಣವನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಕೆ ಮಾಡುವಲ್ಲಿ ಶಾಸಕರು ಹಿಂದುಳಿದಿದ್ದಾರೆ. ಜನಪ್ರತಿನಿಧಿಗಳು ನಿಗದಿತ ಸಮಯದಲ್ಲಿ ಕಾಮಗಾರಿಗಳ ಕ್ರಿಯಾಯೋಜನೆ ಸಲ್ಲಿಸಲು ನಿರಾಸಕ್ತಿ ತೋರುತ್ತಿರುವುದು, ಶಾಸಕರು ಶಿಫಾರಸು ಮಾಡಿದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಚುನಾವಣೆ ಇನ್ನೇನು ಹೊಸ್ತಿಲಲ್ಲಿ ಇದ್ದರೂ ಕ್ಷೇತ್ರಾಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ವೇಗ ಸಿಗದೇ ಇರುವುದು ದುರಂತವೇ ಸರಿ.
ಕ್ಷೇತ್ರಾಭಿವೃದ್ಧಿ ನಿಧಿಯ ಪ್ರಗತಿ ಕೇವಲ 17%: ಯೋಜನೆಯಡಿ 2022–23 ಸಾಲಿನಲ್ಲಿ ಜನವರಿ ತಿಂಗಳು ಮುಗಿದಿದ್ದು, ಬಜೆಟ್ ವರ್ಷ ಅಂತ್ಯವಾಗಲು ಇನ್ನೇನು ಎರಡು ತಿಂಗಳು ಮಾತ್ರ ಉಳಿದಿದೆ. ಆದರೆ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಡಿ ಯೋಜನೆಗಳ ಪ್ರಗತಿ ಮಾತ್ರ ನೀರಸವಾಗಿದೆ. ಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಜನವರಿ ವರೆಗೆ ಕ್ಷೇತ್ರಾಭಿವೃದ್ಧಿ ನಿಧಿಯಡಿ ಪ್ರಗತಿಯಾಗಿದ್ದು ಕೇವಲ 17.62%.