ಬೆಂಗಳೂರು:ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕಾಮಗಾರಿಗಳ ಪ್ರಗತಿ ಆಮೆಗತಿಯಲ್ಲಿ ಸಾಗುತ್ತಿದೆ. ಎರಡು ವರ್ಷವಾದರೂ ಬಹುತೇಕ ಕಾಮಗಾರಿಗಳು ಆರಂಭಗೊಳ್ಳದೇ ಹಾಗೇ ಉಳಿದುಕೊಂಡಿದ್ದು, ಬಿಡುಗಡೆ ಮಾಡಿದ ಕೋಟ್ಯಾಂತರ ರೂ.ವೆಚ್ಚವಾಗದೇ ಜಿಲ್ಲಾಧಿಕಾರಿಗಳ ವೈಯಕ್ತಿಕ ಠೇವಣಿ (ಪಿಡಿ) ಖಾತೆಯಲ್ಲಿ ಕೊಳೆಯುತ್ತಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಶಾಸಕರ ನಿಧಿಯಡಿ ಬಿಡುಗಡೆಯಾಗುತ್ತಿರುವ ಅನುದಾನ ಬಳಕೆಯಾಗದೇ ಹಾಗೇ ಉಳಿದುಕೊಂಡಿದೆ. ಅಲ್ಪ ಪ್ರಮಾಣದ ಕಾಮಗಾರಿಗಳಷ್ಟೇ ಪೂರ್ಣಗೊಂಡಿದ್ದು, ಹಲವು ಕಾಮಗಾರಿಗಳು ಹಾಗೇ ಉಳಿದುಕೊಂಡಿದೆ. ಇದರಲ್ಲಿ ಎರಡು ವರ್ಷಗಳಿಂದಲೂ ಹಲವು ಕಾಮಗಾರಿಗಳು ಪೂರ್ಣಗೊಳ್ಳದೇ ಹಾಗೇ ಉಳಿದುಕೊಂಡಿದೆ. ಇತ್ತ ಜನಪ್ರತಿನಿಧಿಗಳು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಆದರೆ ಅತ್ತ ಕಾಮಗಾರಿ ಸಂಬಂಧ ಕ್ರಿಯಾ ಯೋಜನೆ ಸಲ್ಲಿಸಲು ಶಾಸಕರು ನಿರಾಸಕ್ತಿ ತೋರುತ್ತಿದ್ದಾರೆ. ಹೀಗಾಗಿ ನೂರಾರು ಕೋಟಿ ಶಾಸಕರ ನಿಧಿ ಮೊತ್ತ ವೆಚ್ಚವಾಗದೇ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಉಳಿದುಕೊಂಡಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಿನಿಯೋಗವಾಗದೆ ಕೊಳೆಯುತ್ತಿದೆ ಶಾಸಕರ ನಿಧಿ:
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸರ್ಕಾರ ಅನುದಾನ ಬಿಡುಗಡೆ ಮಾಡಿದರೂ ಅದರ ಬಳಕೆ ಮಾತ್ರ ಅಷ್ಟಕ್ಕಷ್ಟೇ. ಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ನೀಡಿರುವ ಅಂಕಿಅಂಶದ ಪ್ರಕಾರ 2020-21ನೇ ಸಾಲಿನಲ್ಲಿ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಿರುವ ಶಾಸಕರ ನಿಧಿ ಮೊತ್ತದಲ್ಲಿ 761.76 ಕೋಟಿ ರೂ. ವೆಚ್ಚವಾಗದೇ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಉಳಿದುಕೊಂಡಿದೆ.
ಈ ಪೈಕಿ ಹಿಂದಿನ ಆರ್ಥಿಕ ವರ್ಷದ ಕೊನೆಗೆ 672 ಕೋಟಿ ರೂ. ವೆಚ್ಚವಾಗದೇ ಉಳಿದುಕೊಂಡಿದೆ. ಈ ಆರ್ಥಿಕ ಸಾಲಿನಲ್ಲಿ 296 ಕೋಟಿ ರೂ. ಶಾಸಕರ ನಿಧಿಯ ಅನುದಾನ ಬಿಡುಗಡೆ ಮಾಡಲಾಗಿದೆ. ಆ ಮೂಲಕ ಒಟ್ಟು 976 ಕೋಟಿ ರೂ. ಅನುದಾನ ಡಿಸಿಗಳ ಪಿಡಿ ಖಾತೆಯಲ್ಲಿ ಇತ್ತು. ಏ. 2020ರಿಂದ ಡಿಸೆಂಬರ್ ಅಂತ್ಯದವರೆಗೆ 214.29 ಕೋಟಿ ರೂ. ಶಾಸಕರ ನಿಧಿ ವೆಚ್ಚವಾಗಿದೆ. ಹೀಗಾಗಿ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಿರುವ ಶಾಸಕರ ನಿಧಿ ಮೊತ್ತದಲ್ಲಿ 761.76 ಕೋಟಿ ರೂ. ವೆಚ್ಚವಾಗದೇ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಉಳಿದುಕೊಂಡಿದೆ.
ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ ಶಾಸಕರ ನಿಧಿ: