ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಸ್ಪಷ್ಟವಾದ ಬೆನ್ನಲ್ಲೇ ಸಚಿವಾಕಾಂಕ್ಷಿಗಳ ರಹಸ್ಯ ಸಭೆ ನಡೆದಿದೆ. ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಭೆ ಸೇರಿದ ಆಕಾಂಕ್ಷಿಗಳು ಕೆಲಕಾಲ ಮಾತುಕತೆ ನಡೆಸಿದ್ದು ರಾಜ್ಯ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡುವಂತೆ ಮಾಡಿದೆ.
ಉಪ ಚುನಾವಣೆ ಮುಗಿದ ಬಳಿಕ ಸಂಪುಟ ವಿಸ್ತರಣೆಗೆ ಸಿಎಂ ಯಡಿಯೂರಪ್ಪ ಸಿದ್ದರಾಗುತ್ತಿದ್ದಂತೆ ಸದ್ದಿಲ್ಲದೆ ಆಕಾಂಕ್ಷಿಗಳ ಲಾಬಿಯೂ ಆರಂಭಗೊಂಡಿದೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನಿವಾಸ ಇಂದು ಸಚಿವಾಕಾಂಕ್ಷಿಗಳ ಸಭೆಗೆ ಸಾಕ್ಷಿಯಾಯಿತು.
ಮುರುಗೇಶ್ ನಿರಾಣಿ, ಶಂಕರ್ ಪಾಟೀಲ್ ಮುನೇನಕೊಪ್ಪ, ರಾಜುಗೌಡ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಶಾಸಕ ಬೆಳ್ಳಿ ಪ್ರಕಾಶ್ ಸೇರಿದಂತೆ ಹಲವು ಸಚಿವಾಕಾಂಕ್ಷಿಗಳು ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸೇರಿಕೊಂಡು ಸಭೆ ನಡೆಸಿದರು.
ಸಚಿವ ಸಂಪುಟ ಪುನರಚನೆ ವಿಚಾರ ಚರ್ಚೆ, ಸಿಎಂಗೆ ಸಚಿವ ಸ್ಥಾನದ ಬೇಡಿಕೆ ಸಲ್ಲಿಸುವುದು, ಹಾಲಿ ಸಚಿವರನ್ನು ಕೈ ಬಿಟ್ಟರೆ ಮತ್ಯಾರಿಗೆ ಸಚಿವ ಸ್ಥಾನ ಸಿಗಲಿದೆ? ಎಂಬೆಲ್ಲಾ ವಿಚಾರಗಳ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಶಾಸಕರ ಸಭೆ ಆದರೆ ಸಚಿವಾಕಾಂಕ್ಷಿಗಳ ಸಭೆ ನಡೆದಿದೆ ಎನ್ನುವುದನ್ನು ಸಚಿವ ರಮೇಶ್ ಜಾರಕಿಹೊಳಿ ತಳ್ಳಿ ಹಾಕಿದರು. ಬೈ ಎಲೆಕ್ಷನ್ ಬಳಿಕ ಎಲ್ಲರೂ ಕೂಡಿ ಸಂತೋಷದಿಂದ ಊಟ ಮಾಡಿದ್ದೇವೆ. ನಮ್ಮನೆಗೆ ಎಲ್ಲರೂ ಬಂದಿದ್ದರು ಇದರಲ್ಲಿ ವಿಶೇಷತೆ ಏನಿಲ್ಲ ಎಂದರು.
ಸಂಪುಟದಿಂದ ಕೆಲ ಸಚಿವರನ್ನು ಕೈಬಿಡಬೇಕೆಂಬ ಹೆಚ್ ವಿಶ್ವನಾಥ್ ಒತ್ತಾಯ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ, ಸಂಪುಟ ವಿಸ್ತರಣೆ ಸಿಎಂ ಮತ್ತು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು ಅವರ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ, ನಾನು ಪವರ್ ಸೆಂಟರ್ ಅಲ್ಲ ಡಿಸಿಎಂ ಆಕಾಂಕ್ಷಿಯೂ ಅಲ್ಲ ಸಚಿವನಾಗಿದ್ದೇನೆ, ಒಳ್ಳೆಯ ಖಾತೆ ನೀಡಿದ್ದಾರೆ, ಸಂಪುಟದಲ್ಲಿ ಹೊಸ ಮುಖ ಬೇಕು ಎನ್ನುವ ವಿಶ್ವನಾಥ್ ಹೇಳಿಕೆ ಅದು ಅವರ ವೈಯಕ್ತಿಕ ಅಭಿಪ್ರಾಯ, ಅದು ರಮೇಶ್ ಜಾರಕಿಹೊಳಿ ಅಭಿಪ್ರಾಯ ಅಲ್ಲ ಎಂದರು.
ನಾನೊಬ್ಬ ಸಾಮಾನ್ಯ ಮನುಷ್ಯ ನಾನು ಮತ್ತೊಂದು ಪವರ್ ಸೆಂಟರ್ ಅಲ್ಲ ನಾನಾಯ್ತು, ನನ್ನ ಇಲಾಖೆ ಕೆಲಸ ಆಯ್ತು. ವಿಶ್ವನಾಥ್ಗೆ ಸಚಿವ ಸ್ಥಾನ ಕೊಡುವ ವಿಚಾರ ಸಿಎಂ ಮತ್ತು ಹೈಕಮಾಂಡ್ಗೆ ಬಿಟ್ಟಿದ್ದು, ಸಿಎಂ ಕೊಟ್ಟ ಮಾತಂತೆ ಇದುವರೆಗೆ ನಡೆದುಕೊಂಡಿದ್ದಾರೆ. ಹೈಕಮಾಂಡ್ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ, ಶಂಕರ್ ಮತ್ತು ಎಂಟಿಬಿಗೆ ಸಚಿವ ಸ್ಥಾನ ಕೊಡಲು ಹೈಕಮಾಂಡ್ ಚಿಂತನೆ ಮಾಡಿದೆ ಹೈಕಮಾಂಡ್ ಒಳ್ಳೆ ನಿರ್ಣಯ ತೆಗೆದುಕೊಳ್ಳಲಿದೆ ಎಂದರು.