ಬೆಂಗಳೂರು: ಚಾಮರಾಜಪೇಟೆಯ ರಾಯಪುರಂನಲ್ಲಿರುವ ಸಂತ ಪೀಟರ್ ಪೌಲ್ ಚರ್ಚ್ನ ಫಾದರ್ ಡೊಮಿನಿಕ್ ಝೇವಿಯರ್ ಪರಿಶ್ ಅವರು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮುಂದಿನ ದಿನಗಳಲ್ಲಿ ಸಿಎಂ ಆಗುವಂತೆ ಆಶೀರ್ವದಿಸಿದ್ದಾರೆ. ಚಾಮರಾಜಪೇಟೆಯಲ್ಲಿ ಮದರ್ ಮೇರಿ ಫೆಸ್ಟಿವಲ್ ನಿನ್ನೆ ರಾತ್ರಿ ಸಂಭ್ರಮದಿಂದ ಜರುಗಿತು.
ಜಮೀರ್ ಅಹ್ಮದ್ ಸಿಎಂ ಆಗಲೆಂದು ಆಶೀರ್ವದಿಸಿದ ಸಂತ ಪೀಟರ್ ಪೌಲ್ ಚರ್ಚ್ ಫಾದರ್ ಹಬ್ಬದ ಪ್ರಯುಕ್ತ ರಾಯಪುರಂನಲ್ಲಿರುವ ಸಂತ ಪೀಟರ್ ಪೌಲ್ ಚರ್ಚಿಗೆ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಫಾದರ್ ಡೊಮಿನಿಕ್ ಝೇವಿಯರ್ ಪರಿಶ್ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಫಾದರ್ ಡೊಮಿನಿಕ್ ಝೇವಿಯರ್, 2005ರಿಂದ ಸತತವಾಗಿ ಶಾಸಕರಾಗಿ, ಸಚಿವರಾಗಿ ಸಾಕಷ್ಟು ಜನಪರ ಕಾರ್ಯಗಳು, ಸಾಮಾಜಿಕ ಚಟುವಟಿಕೆಗಳು, ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.
ಈ ಮೂಲಕ ಚಾಮರಾಜಪೇಟೆಯಷ್ಟೇ ಅಲ್ಲದೇ, ರಾಜ್ಯಮಟ್ಟದ ನಾಯಕರಾಗಿ ಬೆಳೆದಿದ್ದಾರೆ. ಭಾವೈಕ್ಯತೆ, ಸಾಮರಸ್ಯದ ಮನೋಭಾವ ಹೊಂದಿರುವ ಶಾಸಕ ಜಮೀರ್ ಅಹ್ಮದ್ ಖಾನ್ ಅವರಲ್ಲಿ ಮುಖ್ಯಮಂತ್ರಿಗಳಾಗುವ ಎಲ್ಲ ಅರ್ಹತೆಗಳೂ ಇವೆ. ಹಾಗಾಗಿ, ಮುಂದಿನ ದಿನಗಳಲ್ಲಿ ಅವರು ಈ ರಾಜ್ಯದ ಸಿಎಂ ಆಗಲಿ ಎಂದು ಆಶೀರ್ವದಿಸಿದರು.
ಚರ್ಚ್ನ ಮತ್ತೊಬ್ಬ ಫಾದರ್ ಲೂಕಸ್ ಅವರ ತಂದೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ಸುದ್ದಿ ತಿಳಿದ ಜಮೀರ್ ಕೂಡಲೇ ಅವರ ಚಿಕಿತ್ಸೆಗಾಗಿ 50 ಸಾವಿರ ರೂ. ಧನ ಸಹಾಯ ಮಾಡಿ, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ಚಾಮರಾಜಪೇಟೆಯ ಕಾಂಗ್ರೆಸ್ ಮುಖಂಡ ಅಲ್ತಾಫ್ ಖಾನ್ ಶಾಸಕರಿಗೆ ಸಾಥ್ ನೀಡಿದರು.
ಇದನ್ನೂ ಓದಿ:ಸಿಎಂ ಭೇಟಿಯಾದ ಜಮೀರ್ ಅಹ್ಮದ್ ಖಾನ್: ಮಹತ್ವದ ವಿಷಯಗಳ ಕುರಿತು ಚರ್ಚೆ