ಬೆಂಗಳೂರು:ಬಾಗಲಕೋಟೆಯ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ತಮ್ಮ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಅವರಿಗೆ ಕೈಗಾರಿಕಾ ಭೂಮಿ ಹಂಚಿಕೆ ಮಾಡಲು ನಡೆಸಿದ್ದ ಸಭೆಯಲ್ಲಿ ಭಾಗವಹಿಸಿದ್ದು ಸರಿಯಲ್ಲ ಎಂದು ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಕೈಗಾರಿಕಾ ಭೂಮಿ ಹಂಚಿಕೆ ವಿಚಾರವಾಗಿ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾ.ಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ವಿಭಾಗೀಯ ಪೀಠ, ಮಲ್ಲಿಕಾರ್ಜುನ ಅವರು ಕೇವಲ 1.33 ಎಕರೆ ಮಾತ್ರ ಕೈಗಾರಿಕಾ ಭೂಮಿ ಹೊಂದಲು ಅರ್ಹರು ಎಂದು ಆದೇಶಿಸಿದೆ.
ಪೀಠ ತನ್ನ ತೀರ್ಪಿನಲ್ಲಿ ಶಾಸಕರ ನಡವಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ನಾವು ವಕೀಲರಿಂದ ಖಚಿತಪಡಿಸಿಕೊಂಡಿದ್ದೇವೆ. ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಅವರು ಬೇರೆ ಯಾರೂ ಅಲ್ಲ ಅರ್ಜಿದಾರರಾಗಿರುವ ಮಲ್ಲಿಕಾರ್ಜುನ ಸಿ.ಚರಂತಿಮಠ ಸಹೋದರ. ವೀರಣ್ಣ ಭಾಗವಹಿಸಿದ್ದ ಸಭೆಯಲ್ಲಿಯೇ ಅವರ ಸಹೋದರನಿಗೆ ಭಾರಿ ಪ್ರಮಾಣದ ಕೈಗಾರಿಕಾ ಭೂಮಿ ಹಂಚಿಕೆ ಮಾಡಲು ನಿರ್ಧರಿಸಲಾಗಿತ್ತು.
ಆದರೆ, ಏಕಸದಸ್ಯ ಪೀಠ ಈ ಅಂಶವನ್ನು ಪರಿಗಣಿಸಿಲ್ಲ. ಇನ್ನು ತಮ್ಮ ಸಹೋದರನಿಗೆ ಭೂ ಹಂಚಿಕೆಯ ವಿಚಾರ ಸಭೆಯ ನಡಾವಳಿಯಲ್ಲಿದೆ ಎಂದು ತಿಳಿದ ನಂತರ ಶಾಸಕರು ಸಭೆಯಲ್ಲಿ ಭಾಗವಹಿಸುವುದರಿಂದ ಹಿಂದೆ ಸರಿಯಬಹುದಿತ್ತು. ಆದರೆ, ಹಾಗೆ ನಡೆದುಕೊಂಡಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ:CEN ಠಾಣೆಗಳಿಗೆ ಮೂಲಸೌಕರ್ಯ: 4 ಕೋಟಿ ರೂ ಮಂಜೂರು ಮಾಡಿರುವುದಾಗಿ High Courtಗೆ ಮಾಹಿತಿ
ಅಲ್ಲದೇ, ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸಂಬಂಧಿಗಳು ಭಾಗವಹಿಸಿದಾಗ ಅಂತಹ ನಿರ್ಣಯಗಳು ಕಳಂಕಿತಗೊಳ್ಳುತ್ತವೆ. ಜತೆಗೆ ಸವಾಲಿಗೆ ಗುರಿಯಾಗುತ್ತದೆ ಎಂದು ಸುಪ್ರೀಂಕೋರ್ಟ್ ಹಲವು ಆದೇಶಗಳಲ್ಲಿ ಹೇಳಿದೆ. ಪರಿಹಾರ ಕೋರಲಿಕ್ಕಾಗಿ ಸತ್ಯವನ್ನು ಮುಚ್ಚಿಡುವುದು ಸರಿಯಲ್ಲ.
ಆದರೂ, ಅರ್ಜಿದಾರ ಭೂಮಿ ಕಳೆದುಕೊಂಡಿರುವುದನ್ನು ಪರಿಗಣಿಸುತ್ತೇವೆ. ಹೀಗಾಗಿ ಅರ್ಜಿದಾರ ಕಾನೂನಿನ ಪ್ರಕಾರ ಸೂಕ್ತ ಕೈಗಾರಿಕಾ ಪ್ರದೇಶ ಪಡೆಯಲು ಅರ್ಹರಾಗಿದ್ದಾರೆ ಎಂದು ಅರ್ಜಿಯನ್ನು ಕೋರ್ಟ್ ಭಾಗಶಃ ಪುರಸ್ಕರಿಸಿದೆ.
ಪ್ರಕರಣದ ಹಿನ್ನೆಲೆ :
ಶಾಸಕ ವೀರಣ್ಣ ಚರಂತಿಮಠ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಅವರಿಗೆ 7.39 ಎಕರೆ ಜಾಗವವನ್ನು ಹಂಚಿಕೆ ಮಾಡಲು 2012 ರ ಡಿ.17ರಂದು ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಣಯ ಕೈಗೊಂಡಿತ್ತು. ಆ ನಿರ್ಣಯ ಜಾರಿಗೊಳಿಸಿಲ್ಲ ಎಂದು ಅವರು ಕೋರ್ಟ್ ಮೊರೆ ಹೋಗಿದ್ದರು.
2020ರ ಜುಲೈ 17ರಂದು ಏಕಸದಸ್ಯಪೀಠ ಆದೇಶ ಹೊರಡಿಸಿ, 2012ರ ಡಿ.17ರಂದು ಕೈಗೊಂಡಿರುವ ನಿರ್ಧಾರದಂತೆ 7.39 ಎಕರೆ ಜಾಗವವನ್ನು ಹಂಚಿಕೆ ಮಾಡಬೇಕು, ಅರ್ಜಿದಾರರ ಮನವಿ ಪರಿಗಣಿಸಬೇಕು ಎಂದು ಆದೇಶ ನೀಡಿತ್ತು. ಆ ಆದೇಶವನ್ನು ಪ್ರಶ್ನಿಸಿ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ ಧಾರವಾಡದ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು.