ಬೆಂಗಳೂರು: ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣದ ನಾಲ್ವರು ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಶಾಸಕ ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣ: ಆರೋಪಿಗಳಿಗೆ ಹೈಕೋರ್ಟ್ ಜಾಮೀನು - High court
ಶಾಸಕ ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣದ ಆರೋಪಿಗಳಾದ ನೂರ್ ಖಾನ್, ಅಕ್ರಮ್, ಸಯ್ಯದ್ ಮುಹೀಬ್ ಮತ್ತು ಅಬ್ದುಲ್ಲಾ ಎಂಬುವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ಜಾಮೀನು ಕೋರಿ ಆರೋಪಿಗಳಾದ ನೂರ್ ಖಾನ್, ಅಕ್ರಮ್, ಸಯ್ಯದ್ ಮುಹೀಬ್ ಮತ್ತು ಅಬ್ದುಲ್ಲಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎಸ್. ಮುದ್ಗಲ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಜಾಮೀನು ನೀಡಿದೆ. ಆರೋಪಿಗಳು ತಲಾ 50 ಸಾವಿರ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ, ವಿಚಾರಣೆಗೆ ಸಹಕಾರ ನೀಡುವುದು ಮತ್ತು ಸಾಕ್ಷ್ಯಾಧಾರ ನಾಶಪಡಿಸಲು ಯತ್ನಿಸಬಾರದು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಿದೆ.
ಪ್ರಕರಣದ ಹಿನ್ನೆಲೆ : 2019ರ ನವೆಂಬರ್ 17ರಂದು ಮೈಸೂರು ನಗರದ ಬನ್ನಿಮಂಟಪ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಶಾಸಕ ತನ್ವೀರ್ ಸೇಠ್ ಭಾಗವಹಿಸಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಸಂಗೀತ ಕಾರ್ಯಕ್ರಮ ವೀಕ್ಷಿಸುತ್ತಾ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಶಾಸಕರ ಮೇಲೆ ದಾಳಿ ಮಾಡಿದ್ದ ಫರಾನ್ ಎಂಬ ಯುವಕ, ಚಾಕುವಿನಿಂದ ಕುತ್ತಿಗೆ ಭಾಗಕ್ಕೆ ಇರಿದು ಪರಾರಿಯಾಗಲು ಪ್ರಯತ್ನಿಸಿದ್ದ. ಕೂಡಲೇ ಸಾರ್ವಜನಿಕರು ಫರಾನ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಆರೋಪಿಗೆ ಮೈಸೂರಿನ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು.