ಬೆಂಗಳೂರು: "ನಾನು ಪಕ್ಷ ಬಿಡುವುದೂ ಇಲ್ಲ, ಲೋಕಸಭೆ ಚುನಾವಣೆಗೂ ಸ್ಪರ್ಧಿಸುವುದಿಲ್ಲ" ಎಂದು ಮಾಜಿ ಸಚಿವ ಹಾಗೂ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಶೇ.100ರಷ್ಟು ಕಾಂಗ್ರೆಸ್ಗೆ ಹೋಗಲ್ಲ. ನನ್ನ ಮಗನೂ ರಾಜಕೀಯಕ್ಕೆ ಬರಲ್ಲ. ಒಂದು ವೇಳೆ ಹಾಗೆ ಮಾಡಿದರೆ ಆ ದಿನವೇ ಬಂದು ನನ್ನನ್ನು ಕೇಳಿ" ಎಂದರು.
"ಕೆಲವರು ಶಾಸಕ ಮುನಿರತ್ನ ಅವರ ಕ್ಷೇತ್ರದಿಂದ ಕಾಂಗ್ರೆಸ್ಗೆ ಹೋಗಿದ್ದಾರೆ. ಇನ್ನು ಕೆಲವರು ಕೆ.ಆರ್.ಪುರಂನಿಂದಲೂ ಹೋಗಿದ್ದಾರೆ. ಆ ರೀತಿ ನನ್ನ ಕ್ಷೇತ್ರದಲ್ಲೂ ಹೋಗಿದ್ದಾರೆ. ಆದರೆ ನನ್ನ ಮೇಲೆ ಏಕೆ ಇಷ್ಟು ಸಂಶಯ" ಎಂದು ಪ್ರಶ್ನಿಸಿದರು.
ದೆಹಲಿಯಿಂದ ಕರೆ ಬಂದಿಲ್ಲ: "ದೆಹಲಿಗೆ ಹೋಗುವ ಬಗ್ಗೆ ಇಲ್ಲಿಯವರೆಗೆ ಕರೆ ಬಂದಿಲ್ಲ. ನಾನು ಕಾಯುತ್ತಿದ್ದೇನೆ. ಮೆಸೇಜ್ ಬಂದ್ರೆ ನಾಳೆ ಹೋಗುತ್ತೇನೆ. ನಾನು ಗೃಹ ಸಚಿವ ಅಮಿತ್ ಶಾ ಜೊತೆ ಚೆನ್ನಾಗಿದ್ದೀನಿ. ಅವರು ಸಹಕಾರ ಮಂತ್ರಿ, ನಾನು ಸಹಕಾರ ಮಂತ್ರಿ ಆಗಿದ್ದೆ ಅಷ್ಟೇ" ಎಂದು ಹೇಳಿದರು.
ನಕಲಿ ಬಿಲ್ ಮಾಡಿದವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, "ಕ್ಷೇತ್ರದ ಜನತೆ ನನ್ನನ್ನು ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಹಾಗಾದರೆ ಕ್ಷೇತ್ರದ ಜನರು ನಮ್ಮನ್ನು ಯಾಕೆ ಗೆಲ್ಲಿಸಿದ್ರು?. ಅವರ ಅಭ್ಯರ್ಥಿಗಳು ನಾಲ್ಕು ಬಾರಿ ಸೋತಿದ್ದಾರೆ" ಎಂದು ಹೇಳಿದರು. "ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಆದೇಶ ಮಾಡಿದ್ದಾರೆ. ನಮ್ಮ ಕ್ಷೇತ್ರದಲ್ಲೂ ತನಿಖೆ ನಡೆಯುತ್ತಿದೆ. ನಕಲಿ ಎಂದು ಗೊತ್ತಾದರೆ ಕ್ರಮವಹಿಸಲಿ" ಎಂದು ಪ್ರತಿಕ್ರಿಯಿಸಿದರು.
ಪಕ್ಷ ಬಿಡುವ ನಿರ್ಧಾರ ಮಾಡಿಲ್ಲ:"ನಾನು ಪಕ್ಷ ಬಿಡುವ ನಿರ್ಧಾರ ಮಾಡಿಲ್ಲ" ಎಂದು ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಹೆಬ್ಬಾರ್, "ನಾವು ಕಾಂಗ್ರೆಸ್ಗೆ ಹೋಗುತ್ತೇವೆ ಅನ್ನುವ ವಿಚಾರ ಯಾಕೆ ಬಂತೋ ಗೊತ್ತಿಲ್ಲ. ಅದನ್ನು ನಾವೂ ಸಹ ಆಲೋಚನೆ ಮಾಡ್ತೀವಿ. ಬೆಂಬಲಿಗರು ಅವರದ್ದೇ ಆದ ರೀತಿಯಲ್ಲಿ ಮಾತಾಡ್ತಾರೆ. ನಾವು ಪಕ್ಷ ಬಿಡುವ ಬಗ್ಗೆ ನಿರ್ಧಾರ ಮಾಡಿಲ್ಲ" ಎಂದು ಸ್ಪಷ್ಟಪಡಿಸಿದರು. "ನಾವು ಬಿಜೆಪಿಯಲ್ಲೇ ಇರುತ್ತೇವೆ. ಹೇಳುವ ಕಾಲ ಬಂದಾಗ ಹೇಳುತ್ತೇವೆ. ಯಾವುದನ್ನು ಯಾವಾಗ ಹೇಳಬೇಕೋ ಆಗ ಹೇಳುತ್ತೇವೆ" ಎಂದರು.
ಇದನ್ನೂ ಓದಿ :ಬಿಜೆಪಿಯಲ್ಲಿ ನೆಮ್ಮದಿಯಾಗಿ ಕೆಲಸ ಮಾಡಲು ಅವಕಾಶ ನೀಡಿ: ಮಾಜಿ ಸಚಿವ ಎಸ್.ಟಿ. ಸೋಮಶೇಖರ್