ಕರ್ನಾಟಕ

karnataka

ನಾನು ಹಲ್ಲೆ ಮಾಡಿಲ್ಲ, ಅವರೇ ನನ್ನ ಸೀರೆ, ಕೂದಲು ಎಳೆದರು: ಶಾಸಕಿ ಸೌಮ್ಯಾ ರೆಡ್ಡಿ

By

Published : Jan 20, 2021, 7:19 PM IST

ಪ್ರತಿಭಟನೆಯ ವೇಳೆ ನಾನು ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿಲ್ಲ. ನನ್ನ ಸೀರೆ, ಕೂದಲು ಎಳೆದಿದ್ದು ಅವರೇ ಎಂದು ಶಾಸಕಿ ಸೌಮ್ಯಾ ರೆಡ್ಡಿ ತಮ್ಮ ಮೇಲಿನ ಆರೋಪದ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ.

mla sowmya reddy gives clarificationon assaults lady constable issue
ಶಾಸಕಿ ಸೌಮ್ಯರೆಡ್ಡಿ ಸ್ಪಷ್ಟನೆ

ಬೆಂಗಳೂರು: ಕೇಂದ್ರ ಸರ್ಕಾರ ಜಾರಿ ತಂದಿರುವ ಕೃಷಿ ಕಾಯ್ದೆಗಳನ್ನು ಖಂಡಿಸಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ‌ ಶಾಸಕಿ ಸೌಮ್ಯಾ ರೆಡ್ಡಿ ಮಹಿಳಾ ಪೊಲೀಸ್ ಕಾನ್​ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಇದೀಗ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

ಶಾಸಕಿ ಸೌಮ್ಯಾ ರೆಡ್ಡಿ ಹೇಳಿಕೆ

ಪೊಲೀಸ್ ಸಿಬ್ಬಂದಿಯ ವರ್ತನೆ ಖಂಡಿಸಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

'ನಾವು ಪ್ರತಿಭಟನೆಯ ಬಳಿಕ ರಾಜಭವನ ಕಡೆ ಹೊರಟಿದ್ವಿ. ಆಗ ಏಕಾಏಕಿ ಇಪ್ಪತ್ತು ಮಹಿಳಾ ಪೊಲೀಸ್ ಸಿಬ್ಬಂದಿ ಬಂದು ನಮ್ಮನ್ನು ಹಿಡಿದುಕೊಳ್ಳಲು ಯತ್ನಿಸಿದ್ದರು. ನಾನು ತಲೆ ಸುತ್ತು ಬಂದು ನೀರಿಗಾಗಿ ಕಾಯುತ್ತಿದ್ದೆ. ಆದರೆ ಅವರು ನನ್ನನ್ನು ನೀರು ಕುಡಿಯುವುದಕ್ಕೂ ಬಿಟ್ಟಿಲ್ಲ. ಪದೇ ಪದೆ ಬಂದು ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ರು. ನನ್ನನ್ನು ಮುಟ್ಟಬೇಡಿ, ನಾವೇ ಹೋಗ್ತೀವಿ ಅಂತ ಹೇಳಿದೆ. ಆದ್ರೂ ಬಿಟ್ಟಿಲ್ಲ ಎಳೆದಾಡಿದರು. ನಾನು ರಸ್ತೆಯಲ್ಲಿ ಬಿದ್ದು ಹೋದೆ. ಪ್ರತಿಭಟನೆ ವೇಳೆ ನನ್ನ ಸೀರೆ ಹಾಗೂ ಕೂದಲನ್ನು ಮಹಿಳಾ ಪೊಲೀಸರು ಎಳೆದಾಡಿದ್ದಾರೆ' ಎಂದು ಜಯನಗರ ಶಾಸಕಿ ದೂರಿದರು.

'ನಾನು ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿಲ್ಲ. ಅವರೇ ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ ಶಾಸಕಿ ಅಂಜಲಿ‌ ನಿಂಬಾಳ್ಕರ್ ಸಹ ಇದ್ದರು. ಅವರೂ ಬೆಳಗ್ಗೆಯಿಂದ ನೀರು ಕುಡಿದಿರಲಿಲ್ಲ, ಊಟ ಮಾಡಿರಲಿಲ್ಲ. ಇದೀಗ ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ಘಟನೆ ಬಗ್ಗೆ ಮನವರಿಕೆ ಮಾಡಿದ್ದೇನೆ' ಎಂದು ಅವರು ತಿಳಿಸಿದರು.

ಇದನ್ನೂ ಓದಿ:ಮಹಿಳಾ ಪೊಲೀಸ್ ಕಾನ್​ಸ್ಟೇಬಲ್ ಮೇಲೆ ಬಲ ಪ್ರದರ್ಶಿಸಿದ್ರೇ ಶಾಸಕಿ ಸೌಮ್ಯರೆಡ್ಡಿ!?

ABOUT THE AUTHOR

...view details