ಬೆಂಗಳೂರು: ಅನಿವಾರ್ಯವಾದ್ರೆ ರಾಜಕೀಯ ಬಿಡುತ್ತೇನೆಯೇ ಹೊರತು ಬಿಜೆಪಿ ಬಿಡಲ್ಲಾ ಎಂದು ಶಾಸಕ ಸೋಮಶೇಖರ್ ರೆಡ್ಡಿ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ನವರು ನಮಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ಅವರಿಂದ ನಮಗೆ ಸಾಕಷ್ಟು ಸಮಸ್ಯೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಆ ಪಕ್ಷ ಸೇರುವ ಯೋಚನೆ ಸಹ ಮಾಡಲು ಸಾಧ್ಯವಿಲ್ಲ ಎಂದರು.
ನಿನ್ನೆ ಕಾಂಗ್ರೆಸ್ ಸದನದಲ್ಲಿ ಧರಣಿ ಮಾಡ್ತಿದ್ರು. ನಾನು ನನ್ನ ಫೈಲ್ ಅನ್ನ ಅಲ್ಲಿಯೇ ಮರೆತು ಬಿಟ್ಟು ಬಂದಿದ್ದೆ. ತೆಗೆದುಕೊಳ್ಳಲು ಸದನಕ್ಕೆ ಹೋಗಿದ್ದಾಗ ಸಿದ್ದರಾಮಯ್ಯ ನನ್ನನ್ನ ಕರೆದ್ರು. ಕಾಂಗ್ರೆಸ್ಗೆ ಬರ್ತೀರಾ ಅಂತಾ ಕೇಳಿದ್ರು.
ಈ ಸಂದರ್ಭದಲ್ಲಿ ನನ್ನ ಮಾತನ್ನ ಕೆಲವರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡು ಅದನ್ನ ವೈರಲ್ ಮಾಡಿದ್ದಾರೆ. ಇಂತಹ ಕೀಳುಮಟ್ಟದ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ರಾಜೂಗೌಡ ಮಾತನಾಡಿ, ಕಾಂಗ್ರೆಸ್‌ನವರಿಗೆ ಚರ್ಚೆ ಮಾಡಲು ವಿಚಾರಗಳಿಲ್ಲ. ನಿಮಗೆ ವಿಷಯಗಳು ಇಲ್ಲ ಅಂದ್ರೆ ನಾವು ವಿಷಯಗಳನ್ನ ಕೊಡ್ತೇವೆ. ಕಲ್ಯಾಣ ಕರ್ನಾಟಕದಲ್ಲಿ ಹಲವು ಸಮಸ್ಯೆಗಳಿವೆ.
ನಿಮ್ಮ ಪ್ರತಿಭಟನೆಯಿಂದ ಹಲವರಿಗೆ ಅನುಕೂಲ ಆಗುವ ಕೆಲಸ ಆಗಲಿ. ಜನ ಇವತ್ತು ಛೀ, ತೂ.. ಅಂತಾ ಉಗಿಯುತ್ತಿದ್ದಾರೆ. ದಯವಿಟ್ಟು ಧರಣಿ ವಾಪಸ್ ತೆಗೆದುಕೊಳ್ಳಿ, ರಾಜ್ಯದ ಜನತೆಗೆ ಒಳ್ಳೆಯದಾಗಲಿ ಎಂದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ರಾಜೂಗೌಡ ರಾಜ್ಯದ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಯುವ ಶಾಸಕರು ಬಂದಿದ್ದೇವೆ. ಕಾಲಹರಣ ಮಾಡದೆ ಸಭೆಗೆ ಬನ್ನಿ. ನಾನೂ ಆಡಳಿತ ಪಕ್ಷದ ಶಾಸಕನಾದ್ರೂ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಆಗಮಿಸಿದ್ದೇನೆ. ಇವರ ಪ್ರತಿಭಟನೆಯಿಂದ ಅವಕಾಶ ಸಿಗದಂತಾಗಿದೆ ಎಂದರು.
ರೋಸ್ಟರ್ ಪದ್ಧತಿ ಅಂದ್ರೆ ಏನು. ಜಾತಿ ಪದ್ಧತಿ ಮೇಲೆ ಮೀಸಲಾತಿ ತೆಗೆಯುತ್ತಿದ್ದೀರಾ. 371ಜೆ ಗಾಗಿ ಹೈದರಾಬಾದ್ ಕರ್ನಾಟಕ ಪ್ರತ್ಯೇಕ ಮಾಡಿದ್ದಾರೆ. ವೈಯಕ್ತಿಕ ಪ್ರತಿಷ್ಠೆಗಾಗಿ ಸದನದ ಕಲಾಪ ಹಾಳು ಮಾಡಬೇಡಿ ಎಂದು ಬೇಸರ ವ್ಯಕ್ತಪಡಿಸಿದರು.