ಬೆಂಗಳೂರು: ಈ ಅಧಿವೇಶನ ಮುಗಿಯುವುದರೊಳಗೆ ನನ್ನ ಮುಂದಿನ ನಡೆಯ ಬಗ್ಗೆ ಒಂದು ತೀರ್ಮಾನ ಕೈಗೊಳ್ಳುತ್ತೇನೆ ಎಂದು ಜೆಡಿಎಸ್ ಶಾಸಕ ಶಿವಲಿಂಗೇ ಗೌಡ ಪ್ರತಿಕ್ರಿಯಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ನನಗೆ ಹೇಳದೆ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಫೆ.12 ರಂದು ಸಮಾವೇಶ ಮಾಡ್ತಿದ್ದಾರೆ. ಆ ಸಭೆಯಲ್ಲಿ ಏನಾಗುತ್ತೋ ಅದರ ಆಧಾರದಲ್ಲಿ ನಾನು ಕಾರ್ಯಕರ್ತರ ಸಭೆ ನಡೆಸಿ ಒಂದು ನಿರ್ಧಾರಕ್ಕೆ ಬರುತ್ತೇನೆ. ಈ ಅಧಿವೇಶನ ಮುಗಿಯುವುದರೊಳಗೆ ಅಂತಿಮ ನಿರ್ಧಾರ ಘೋಷಿಸುತ್ತೇನೆ ಎಂದರು.
ನಾನೀಗ ಯಾವ ನಿರ್ಧಾರವನ್ನೂ ಮಾಡಿಲ್ಲ. ಅಲ್ಲಿ ಜನ ಏನು ಹೇಳ್ತಾರೋ ಅದರಂತೆ ಮಾಡ್ತೇನೆ. ಅವರು ಹೇಳದೇ ನಾನು ಯಾವ ನಿರ್ಧಾರವನ್ನೂ ಮಾಡಲ್ಲ ಎಂದು ಸ್ಪಷ್ಟಪಡಿಸಿದರು. ಅರಸೀಕೆರೆ ಕ್ಷೇತ್ರದಲ್ಲಿ ಸಮಾವೇಶ ನಡೆಸ್ತಿದ್ದಾರೆ. ನಾನು ಕ್ಷೇತ್ರದ ಶಾಸಕ. ನಾನು ಮೊದಲು ಸಮಾವೇಶ ಮಾಡಬೇಕಿತ್ತು. ಒಬ್ಬ ವ್ಯಕ್ತಿ ನನಗೆ ಟಿಕೆಟ್ ನೀಡುವುದಾಗಿ ಹೇಳ್ತಾ ಓಡಾಡ್ತಿದ್ದಾರೆ. ಇದನ್ನು ನೋಡಿದರೆ ನಾಮಕಾವಸ್ತೆಗೆ ಕರೆಯುತ್ತಿದ್ದಾರೆ ಅನ್ನಿಸುತ್ತೆ. ಮಾತಿಗೆ ಮಾತ್ರ ಜೆಡಿಎಸ್ನಲ್ಲೇ ಉಳಿಯಿರಿ ಅಂತಾರೆ. ಕೊನೆ ಘಳಿಗೆಯಲ್ಲಿ ಏನಾದ್ರೂ ಯಡವಟ್ಟಾದ್ರೆ ಹೇಗೆ? ಎಂದು ಹೇಳಿದರು.