ಬೆಂಗಳೂರು: ಉದ್ದೇಶಪೂರ್ವಕವಾಗಿಯೇ ಬೇಜವಾಬ್ದಾರಿಯಿಂದ ಕೆರೆ ಕಟ್ಟೆಯನ್ನು ಒಡೆಯಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹುಳಿಮಾವು ಕೆರೆ ದುರಂತದ ಬಗ್ಗೆ ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಹುಳಿಮಾವು ಕೆರೆ ದುರಂತ: 4 ದಿನಗಳ ಬಳಿಕ ಭೇಟಿ ನೀಡಿದ ಸ್ಥಳೀಯ ಶಾಸಕ - MLA Shatheesh Reddy visit Hulimavu lake Tragedy Place
ಹುಳಿಮಾವು ಕೆರೆ ದುರಂತ ಸಂಭವಿಸಿ ನಾಲ್ಕು ದಿನಗಳ ಬಳಿಕ ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.

ಘಟನೆ ನಡೆದು ನಾಲ್ಕು ದಿನಗಳ ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕೆರೆ ಪಕ್ಕದಲ್ಲೇ ಇರುವ ವಾಲ್ ಮಾರ್ಟ್ ಬಹುಮಹಡಿ ಕಟ್ಟಡದ ಒಳಚರಂಡಿ ನೀರು ಸರಿಯಾಗಿ ಹರಿಯುತ್ತಿರಲಿಲ್ಲ. ಈ ಹಿನ್ನೆಲೆ ಸಮಸ್ಯೆ ಪರಿಹರಿಸುವಂತೆ ಅವರು ಬೆಂಗಳೂರು ಜಲ ಮಂಡಳಿಗೆ ಮನವಿ ಮಾಡಿದ್ದರು. ಆದ್ದರಿಂದ ವಾಲ್ ಮಾರ್ಟ್ ಅಪಾರ್ಟ್ಮೆಂಟ್ ಹಿತ ಕಾಪಾಡಲು, ಬಿಬಿಎಂಪಿಯ ಕೆರೆ ಎಂಜಿನಿಯರ್ ಕೆರೆ ಕಟ್ಟೆ ಒಡೆಯುವಂತೆ ಹೋಂಗಾರ್ಡ್ಗೆ ಸೂಚಿಸುವ ಮೂಲಕ ಬೇಜವಾಬ್ದಾರಿತನ ತೋರಿಸಿದ್ದಾರೆ. ಇದರಿಂದಾಗಿ ದುರ್ಘಟನೆ ಸಂಭವಿಸಿದೆ ಎಂದು ದೂರಿದರು. ಅಲ್ಲದೆ ಘಟನೆಗೆ ಕಾರಣರಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳೊವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಇಂತಹ ದುರ್ಘಟನೆ ಸಂಭವಿಸಬಾರದಿತ್ತು. ಘಟನೆಯಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಯಾವುದೇ ಜೀವ ಹಾನಿ ಆಗದೆ ಇರುವುದು ದೇವರ ಕೃಪೆ. ಕೆರೆ ಅಭಿವೃದ್ಧಿಗೆ 6ರಿಂದ 8 ಕೋಟಿ ಅನುದಾನ ಇಟ್ಟಿದ್ವಿ. ಇನ್ನೇನು ಕಾಮಗಾರಿ ಶುರುವಾಗಬೇಕಿತ್ತು. ಅಷ್ಟರಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ನಷ್ಟ ಸಂಭವಿಸಿದವರಿಗೆ ಎಲ್ಲಾ ರೀತಿಯ ನೆರವು ನೀಡುವಂತ ಕಾರ್ಯಗಳು ನಡೆದಿವೆ. ಈಗಾಗಲೇ ಪಾಲಿಕೆಯಿಂದ 50 ಸಾವಿರ ರೂ. ನೀಡಲಾಗಿದೆ ಎಂದು ತಿಳಿಸಿದರು.