ಹೊಸಕೋಟೆ: ಶಾಸಕ ಶರತ್ ಬಚ್ಚೇಗೌಡ ಭಾಷಣದ ವೇಳೆ ಸಚಿವ ಎಂಟಿಬಿ ನಾಗರಾಜ್ ಅವರು ಹೊರಡಲು ಎದ್ದು ನಿಂತರು. ಆಗ ಶರತ್ ಕುಳಿತುಕೊಳ್ಳಿ ಆಮೇಲೆ ಹೋಗಬಹುದು ಎಂದು ಗರಂ ಆದ ಪ್ರಸಂಗ ನಡೆಯಿತು.
ತಾಲೂಕು ಪಂಚಾಯಿತಿ ಕಚೇರಿಯಲ್ಲಿ ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ಮೊದಲಿಗೆ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ ಮುಗಿಸಿದ್ದರು. ನಂತರ ಶರತ್ ಬಚ್ಚೇಗೌಡ ಮಾತನಾಡುತ್ತಾ, ಕಳೆದ ಒಂದೂವರೆ ವರ್ಷದಿಂದ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ನೀಡದೆ ಮಳೆ,ಬಿಸಿಲಿನಲ್ಲಿ ನಿಲ್ಲಿಸಿ ತುಕ್ಕು ಹಿಡಿದ ಮೇಲೆ ನೀಡುತ್ತಿದ್ದಾರೆ ಎಂದು ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರೊಟಾಕಾಲ್ ಬಗ್ಗೆ ಅಧಿಕಾರಿಗಳು ನಡೆದುಕೊಂಡ ಬಗ್ಗೆ ಕೆಂಡಮಂಡಲರಾದರು. ಇದರಿಂದ ಮುಜುಗರಕ್ಕೆ ಒಳಗೊಂಡ ಸಚಿವರು, ಶಾಸಕರ ಭಾಷಣ ಅರ್ಧಕ್ಕೆ ಅಲ್ಲಿಂದ ಹೋಗಲು ಮುಂದಾದರು.
ಶರತ್ ಬಚ್ಚೇಗೌಡ ಗರಂ:
ಶರತ್ ಬಚ್ಚೇಗೌಡ ಭಾಷಣ ಮಾಡುವ ಸಮಯದಲ್ಲಿ ಸಚಿವ ಎಂಟಿಬಿ ನಾಗರಾಜ್ ಹೊರಡಲು ಮುಂದಾದರು. ಈ ವೇಳೆ ಶರತ್ ಕುಳಿತುಕೊಳ್ಳಿ, ಹೋಗಬಹುದು. ನೀವು ಮಾತನಾಡುವಾಗ ನಾನು ಕುಳಿತುಕೊಂಡು ಕೇಳಿಸಿಕೊಂಡಿಲ್ವಾ? ಸ್ವಲ್ಪ ಹೊತ್ತು ಕುಳಿತುಕೊಳ್ಳಿ ಎಂದು ಗರಂ ಆದರು. ಆಗ ಎಂಟಿಬಿ ನೀವು ದಿನಪೂರ್ತಿ ಮಾತನಾಡುತ್ತೀರಾ. ನನಗೆ ಅಷ್ಟು ಸಮಯವಿಲ್ಲ ಎಂದರು.