ಹೊಸಕೋಟೆ (ಬೆಂಗಳೂರು ಗ್ರಾಮಾಂತರ) :ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶಾಸಕ ಶರತ್ ಬಚ್ಚೇಗೌಡ ಅವರು, ಕಾಂಗ್ರೆಸ್ ಹೈಕಮಾಂಡ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಯಾವುದೇ ಜವಾಬ್ದಾರಿ ನೀಡಿದರೂ, ನಿರ್ವಹಿಸಲು ತಯಾರಿದ್ದೇನೆ ಎಂದು ಹೇಳಿದರು
ಹೊಸಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂರು ವರ್ಷದಿಂದ ಜನರ ಮಧ್ಯೆ ಶಾಸಕನಾಗಿದ್ದೇನೆ. ಇನ್ನಷ್ಟು ಜನರ ಸಮಸ್ಯೆ ಪರಿಹಾರ ಮಾಡಬೇಕು. ಹಲವಾರು ಕಾರ್ಯಕ್ರಮಗಳನ್ನು ರೂಪಿಸಬೇಕು. ನಾನು ಅತೃಪ್ತನಲ್ಲ ಅಸಮಾಧಾನಿತನಲ್ಲ. ಪಕ್ಷ ಕೊಡುವ ಜವಾಬ್ದಾರಿ ನಿರ್ವಹಿಸುತ್ತೇನೆ. ಗೃಹ ಮಂಡಳಿ ಸೇರಿದಂತೆ ಯಾವುದೇ ಜವಾಬ್ದಾರಿ ನಿರ್ವಹಿಸಲು ನಾನು ತಯಾರಿದ್ದೇನೆ ಎಂದರು.
ಹೊಸಕೋಟೆಯ ಎಸ್ಪಿಜಿ ಆಸ್ಪತ್ರೆಯಲ್ಲಿ, ನಡೆಯುತ್ತಿದ್ದ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶರತ್ ಬಚ್ಚೇಗೌಡ, ಈ ಒಂದು ಘಟನೆಯನ್ನು ಯಾರು ಸಮರ್ಥನೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗೂ ಭ್ರೂಣ ಹತ್ಯೆ ಸಮರ್ಥಿಸುವ ಪ್ರಶ್ನೆಯಿಲ್ಲ. ಅತ್ಯಂತ ಕ್ರೂರವಾದ ಪ್ರಕರಣವನ್ನು ನಾನು ಖಂಡಿಸುತ್ತೇನೆ. ಈಗಾಲೇ ಆಸ್ಪತ್ರೆ ನಡೆಸುತ್ತಿದ್ದ ಪ್ರಮುಖ ಆರೋಪಿ ಡಾ. ಶ್ರೀನಿವಾಸ್ ಮತ್ತು ಆತನ ಜೊತೆಯಲ್ಲಿರುವವರನ್ನು ಬಂಧಿಸಿದ್ದಾರೆ. 15 ದಿನಗಳ ಕಾಲ ಅವರನ್ನು ವಶಕ್ಕೆ ಪಡೆದು ವಿಚಾರಣೆ ಸಹ ನಡೆಸುತ್ತಿದ್ದಾರೆ. ಈ ಬಗ್ಗೆ ಎಸ್ಪಿ, ಎಎಸ್ಪಿ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ಪಡೆದುಕೊಳ್ತಿದ್ದೇನೆ.