ಬೆಂಗಳೂರು: ರಾಜ್ಯದಲ್ಲಿ ಮೂವರು ಮುಖ್ಯಮಂತ್ರಿಗಳು ಇದ್ದಾರೆ. ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ, ಎರಡನೇ ಮುಖ್ಯಮಂತ್ರಿ ವಿಜಯೇಂದ್ರ, ಶಿವಮೊಗ್ಗ ಜಿಲ್ಲೆಯ ಮುಖ್ಯಮಂತ್ರಿ ಸಂಸದ ರಾಘವೇಂದ್ರ ಎಂದು ಭದ್ರಾವತಿ ಶಾಸಕ ಸಂಗಮೇಶ್ ಅವರು ಸಿಎಂ ಕುಟುಂಬದ ವಿರುದ್ಧ ಗುಡುಗಿದ್ದಾರೆ.
ವಿಧಾನಸೌಧದಲ್ಲಿ ಸಿಎಂ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರತಿ ಕೆಲಸದಲ್ಲಿಯೂ ಕುಟುಂಬ ಸದಸ್ಯರು ತಲೆ ತೂರಿಸುತ್ತಾರೆ. ಇಬ್ಬರು ಪುತ್ರರಲ್ಲದೇ ಓರ್ವ ಪುತ್ರಿ ಕೂಡ ರಾಜಕೀಯ ಚಟುವಟಿಕೆಗಳಲ್ಲಿ ತಲೆ ತೂರಿಸುತ್ತಿದ್ದಾರೆ ಎಂದು ಆರೋಪ ಮಾಡಿದರು.
ಭದ್ರಾವತಿಯಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯ ಆಯೋಜಿಸಿದ್ದೆವು. ಬಹುಮಾನ ಕೊಡುವ ವೇಳೆ ಆರ್ಎಸ್ಎಸ್ ಧರ್ಮ, ಜಾತಿ ಮುಂದಿಟ್ಟು ಕಿತಾಪತಿ ನಡೆಸಿದೆ. ಆಟದಲ್ಲಿ ಧರ್ಮ, ಜಾತಿ ರಾಜಕೀಯ ತಂದಿದ್ದಾರೆ. ಕೋಮು ಗಲಭೆ ಸೃಷ್ಟಿಗೆ ಮುಂದಾಗಿದ್ದರು. ಅವರನ್ನು ಅಂದು ಸಮಾಧಾನ ಮಾಡಿದ್ದೆವು. ಆದರೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಟೆಂಪ್ಟ್ ಟು ಮರ್ಡರ್ ಕೇಸ್ ಅನ್ನು ಸಿಎಂ ಅವರ ಕುಟುಂಬದವರು ನನ್ನ ವಿರುದ್ಧ ಹಾಕಿಸಿದ್ದಾರೆ ಎಂದು ಆರೋಪಿಸಿದರು.