ಬೆಂಗಳೂರು: ರಾಜಕೀಯವಾಗಿ ನೆಲೆ ಕಳೆದುಕೊಂಡು ರೆಕ್ಕೆ-ಪುಕ್ಕ ಇಲ್ಲದಂತೆ ಆಗಿದ್ದ ಎಚ್. ವಿಶ್ವನಾಥ್ ಅವರಿಗೆ ಜೆಡಿಎಸ್ ಪಕ್ಷ ಆಸರೆ ನೀಡಿ ಶಾಸಕನಾಗಿ ಮಾಡಿತ್ತು. ಮಂಡ್ಯ ಲೋಕಸಭೆ ಚುನಾವಣೆ ನಂತರ ಜೆಡಿಎಸ್ ಪತನದ ಹಾದಿ ಹಿಡಿಯಲಿದೆ ಎಂದು ವ್ಯಾಖ್ಯಾನ ಮಾಡಿದ್ದ ನಿಮ್ಮ ಮಾತು ನೈತಿಕ ಅದಃಪತನದ ಸಂಕೇತ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಟೀಕಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿದ ಮಹೇಶ್ ಅವರು, ಜೆಡಿಎಸ್ ಪಕ್ಷ ನಾಯಕರನ್ನು ಸೃಷ್ಟಿಸುವ ಕಾರ್ಖಾನೆ ಎಂಬುದು ನಿಮಗೂ ಗೊತ್ತಿದೆ. ರಾಜಕೀಯ ಕಡುಕಷ್ಟಕಾಲದಲ್ಲಿ ಕೈ ಹಿಡಿದ ಪಕ್ಷಕ್ಕೆ ವಂಚನೆ ಮಾಡಿ, ಈಗ ಆತ್ಮ ಮತ್ತು ದೇಹ ಮಾರಿಕೊಂಡ ನಿಮ್ಮಂಥವರು ನುಡಿಯುವ ತಿರುಕನ ಕನಸಿನ ಭಾಷ್ಯ ಎಂದಿಗೂ ನಿಜವಾಗದು ಎಂದು ಬರೆದಿದ್ದಾರೆ.
ಸಿದ್ಧಾಂತ ತತ್ವ ಎಂದು ನಾಜೂಕಾಗಿ ಮಾತನಾಡುತ್ತಿದ್ದ ನಿಮ್ಮಂತವರು ಈಗ ಜ್ಯೋತಿಷಿಯಂತೆ ಭವಿಷ್ಯ ಹೇಳುವ, ಪುನರ್ ನೆಲೆ ಕೊಟ್ಟ ಜೆಡಿಎಸ್ ಪಕ್ಷಕ್ಕೆ ಮಾತಿನ ಚಾಟಿ ಬೀಸುವ ನಿಮ್ಮನ್ನು ರಾಜ್ಯದ ಜನತೆ ರೈತ ಬಿತ್ತಿದ ಫಸಲನ್ನು ನುಂಗುವ 'ಕಳ್ಳ ಹಕ್ಕಿ'ಯಂತೆ ನೋಡುತ್ತಿದ್ದಾರೆ ಎಂದು ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಮಯ, ಸಂದರ್ಭ, ರಾಜಕೀಯ ಲಾಭಗಳಿಗೆ ತಕ್ಕಂತೆ ಮಾತು ಮತ್ತು ವಾದಸರಣಿ ಬದಲಿಸುವ ನಿಮ್ಮಂತಹ ಅನೇಕರನ್ನು ಜೆಡಿಎಸ್ ಪಕ್ಷ ಜೀರ್ಣಿಸಿಕೊಂಡಿದೆ. ಇನ್ನು ನಿಮ್ಮಂತಹ ಗೋಸುಂಬೆ ರಾಜಕಾರಣಿ ಯಾವ ಲೆಕ್ಕ? ಎಂದು ವ್ಯಂಗ್ಯವಾಡಿದ್ದಾರೆ.
ಮಂತ್ರಿಯಾಗುವ ಕನಸಿನಲ್ಲಿ ತೇಲುತ್ತಿರುವ ನೀವು ಉಪ್ಪು ತಿಂದ ಮನೆಗೆ ದ್ರೋಹ ಎಸಗಿ, ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಭಾಸವಾಗುತ್ತಿದೆ ಎಂದು ಟೀಕಿಸಿದ್ದಾರೆ.