ಬೆಂಗಳೂರು: ಭಾರತ್ ಜೋಡೋ ಬಂದ್ಯಾ ಪುಟ್ಟ ಹೋದ್ಯಾ ಪುಟ್ಟ ಅಷ್ಟೇ. ಬೊಜ್ಜು, ಕೊಬ್ಬು ಕರುಗಿಸುವ ಸಲುವಾಗಿ ಮಾಡ್ತಿದ್ದಾರೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಲೇವಡಿ ಮಾಡಿದರು.
ಮೋದಿ ವಿಶ್ವ ಗುರು:ವಿಧಾನಸೌಧದಲ್ಲಿ ಮಾತನಾಡಿದ ಅವರು, ಇವತ್ತು ಓಡ್ತಾ ಇರುವ ರಾಹುಲ್ ಗಾಂಧಿ ಪುಕ್ಕಲು ಗುರು. ನಮ್ಮ ಮೋದಿ ವಿಶ್ವ ಗುರು. ಸಿದ್ದರಾಮಯ್ಯ ಕಾಂಗ್ರೆಸ್ ಸೇರುವ ಮೊದಲು ಸಮಾಜವಾದಿ. ಕುರ್ಚಿಗಾಗಿ ಪಕ್ಷ ಬದಲಾವಣೆ ಮಾಡಿದ್ರು. ಕೋಟಿ ಬೆಲೆಯ ವಾಚ್ ಕಟ್ಟಿದ್ರು. ಆಗ ಮಜವಾದಿ ಆದರು. ಅರ್ಕಾವತಿ ರೀಡೂ ಮಾಡಿದ್ರು ಎಂದು ಟೀಕಿಸಿದರು.
ಯಾರು ಸ್ಟ್ರಾಂಗ್ ಎನ್ನೋದನ್ನ ವಿಧಾನಸಭೆ ಚುನಾವಣೆಯಲ್ಲಿ ಜನ ತೀರ್ಮಾನ ಮಾಡ್ತಾರೆ. ಜನ ಸ್ಟ್ರಾಂಗ್. ನೆಹರು ಚೀನಾಕ್ಕೆ ಭೂಮಿ ಬಿಟ್ಟುಕೊಟ್ಟರಲ್ಲ, ನಿಮ್ಮ ನಾಯಕರು ಸ್ಟ್ರಾಂಗಾ?. ಪಾಕ್ ಆಕ್ರಮಿತ ಕಾಶ್ಮೀರ ಬಿಟ್ಟುಕೊಟ್ಟರಲ್ಲ, ಯಾರು ಸ್ಟ್ರಾಂಗ್? ಎಂದು ವಾಗ್ದಾಳಿ ನಡೆಸಿದರು.
ನಿಮ್ಮಲ್ಲಿ ಎಷ್ಟು ಹೊಂದಾಣಿಕೆ ಇದೆ ?:ಮೇಕೆದಾಟು ಪಾದಯಾತ್ರೆ ವೇಳೆ ಸಿದ್ದರಾಮಯ್ಯ ಮಾತನಾಡುವಾಗ, ಡಿ.ಕೆ.ಶಿವಕುಮಾರ್ ಸೆಲ್ಫಿ ಹೊಡೆಸಿಕೊಳ್ತಾ ನಿಂತಿದ್ರು. ಟಿಕೆಟ್ ಫೈನಲ್ ಮಾಡೋದು ನಾನೇ ಅಂದ್ರಲ್ಲ ಡಿಕೆಶಿ. ನಿಮ್ಮಲ್ಲಿ ಎಷ್ಟು ಹೊಂದಾಣಿಕೆ ಇದೆ ಎಂದು ಪ್ರಶ್ನಿಸಿದರು. ಯಡಿಯೂರಪ್ಪ ಕುರ್ಚಿ ಬಿಡುವಾಗ ಕಣ್ಣೀರು ಹಾಕಿದ್ದು ಭಾವೋದ್ವೇಗಕ್ಕೆ. ಪಾರ್ಟಿ ನೀಡಿದ್ದ ಅವಕಾಶಕ್ಕೆ. ಸೆಕೆಂಡ್ ಲೈನ್ ನಾಯಕರನ್ನು ಬೆಳೆಸಲು ಯಡಿಯೂರಪ್ಪ ರಾಜೀನಾಮೆ ನೀಡಿದರು ಎಂದು ಇದೇ ವೇಳೆ ತಿಳಿಸಿದರು.
ಮೋದಿ ಪ್ರಬುದ್ಧ ರಾಜಕಾರಣಿ: ಪ್ರಧಾನ ಮಂತ್ರಿ ಸುದ್ದಿಗೋಷ್ಠಿ ಮಾಡಲಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಮೋದಿಗೆ ಹೇಳುವಷ್ಟು ನಾವು ದೊಡ್ಡವರಲ್ಲ. ಮೋದಿಗೆ ಹೇಳುವಷ್ಟು ಶಕ್ತಿ ನಮಗ್ಯಾರಿಗೂ ಇಲ್ಲ. ಮೋದಿ ಪ್ರಬುದ್ಧ ರಾಜಕಾರಣಿ. ಎಲ್ಲ ಸಂದರ್ಭದಲ್ಲಿ ಮಾಧ್ಯಮಕ್ಕೆ ಮಾತನಾಡಲ್ಲ. ಮಾತು ಸಾಧನೆ ಅಲ್ಲ. ಸಾಧನೆ ಮಾತನಾಡುತ್ತೆ ಎಂದರು.