ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮುಖಂಡ ಪ್ರವೀಣ ಹತ್ಯೆ ಪ್ರಕರಣಕ್ಕೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದೇ ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ ರೇಣುಕಾಚಾರ್ಯ ಕರ್ನಾಟಕದಲ್ಲಿ ಯಾವತ್ತೂ ಮುಸ್ಲಿಮರಿಗೆ ಮುಖ್ಯಮಂತ್ರಿಯಾಗಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ವಿಧಾನಸೌಧದಲ್ಲಿಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರ ಹೇಳಿಕೆಗೆ ಸಬಂಧಿಸಿದಂತೆ ಪ್ರತಿಕ್ರಿಯಿಸಿ, ಜಮೀರ್ ಅವರು ಮುಸ್ಲಿಮರ ಸಂಖ್ಯೆ ಹೆಚ್ಚು ಇದೆ ಎಂದು ಹೇಳುತ್ತಾರೆ. ಹಿಂದೂಗಳು ಹೆಚ್ಚಾಗಿರುವ ದೇಶ ನಮ್ಮದು. ಹಿಂದೂಗಳೇ ಸಿಎಂ ಆಗಿರಬೇಕು. ಕರ್ನಾಟಕದಲ್ಲಿ ಯಾವತ್ತಿದ್ರೂ ಹಿಂದೂಗಳೇ ಸಿಎಂ ಆಗಿರಬೇಕು ಎಂದು ಟಾಂಗ್ ನೀಡಿದರು.
ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮಾತನಾಡಿದರು ಮೌಲಿಗಳು, ಧರ್ಮ ಗುರುಗಳ ಪ್ರಚೋದನೆಯಿಂದ ಈ ರೀತಿ ಆಗುತ್ತಿದೆ. ಹಿಂದೂ-ಮುಸ್ಲಿಂರ ನಡುವೆ ಕೋಮು ಭಾವನೆ ಕೆರಳಿಸುತ್ತೀದ್ದೀರಿ. ಜಮೀರ್ ಅವರೇ ಇದನ್ನು ಇಲ್ಲಿಗೇ ಬಿಟ್ಟುಬಿಡಬೇಕು ಎಂದು ರೇಣುಕಾಚಾರ್ಯ ಎಚ್ಚರಿಕೆ ನೀಡಿದರು. ಕರ್ನಾಟಕದ ಇತಿಹಾಸದಲ್ಲಿ ಹಿಂದೂಗಳೇ ಸಿಎಂ ಆಗಿರಬೇಕು. ಮುಸ್ಲಿಂ ಸಿಎಂ ಆಗುವುದಕ್ಕೆ ನಾವು ಬಿಡುವುದಿಲ್ಲ ಎಂದರು.
ಉತ್ತರ ಪ್ರದೇಶ ಮಾದರಿ ಅನುಸರಿಸಬೇಕು : ಎಲ್ಲೋ ಒಂದು ಕಡೆ ನಮಗೆ ನೋವಾಗುತ್ತಿದೆ. ಶಿವಮೊಗ್ಗದ ಹರ್ಷ, ಬೆಂಗಳೂರಿನ ಚಂದ್ರು ಆಯ್ತು, ನಿನ್ನೆ ಪ್ರವೀಣ್ ಹೀಗೆ ನಿರಂತರವಾಗಿ ಹತ್ಯೆಗಳು ನಡೆಯುತ್ತಿವೆ. ಹಿಂದೂ ಸಂಘಟನೆ, ನಮ್ಮ ಕಾರ್ಯಕರ್ತರು ಟಾರ್ಗೆಟ್ ಆಗಿದ್ದಾರೆ. ಇದರ ಅಂತ್ಯ ಯಾವಾಗ.? ಉತ್ತರ ಪ್ರದೇಶದ ಸಿಎಂ ಆದಿತ್ಯನಾಥ್ ಮಾದರಿಯಲ್ಲಿ ಇವರನ್ನು ಹದ್ದುಬಸ್ತಿನಲ್ಲಿ ಇಡಬೇಕು ಎಂದು ಹೇಳಿದರು.
ನಿರಂತರವಾಗಿ ಹತ್ಯೆ ನಡೆಯುತ್ತಿದೆ. ಸಿಎಂ ಬೊಮ್ಮಾಯಿ ಇದನ್ನು ಗಂಭೀರವಾಗಿ ಪರಿಗಣಿಸ್ತಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 10-15 ಜನರ ಹತ್ಯೆ ಆಗ್ತಿತ್ತು. ಈಗ ಕಂಟ್ರೋಲ್ ಆಗಿದೆ. ಸಿಎಂ ಭೇಟಿ ಮಾಡಿ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.
ನನಗೂ ಬೆದರಿಕೆ :ನನಗೂ ಬೆದರಿಕೆ ಕರೆ ಬಂದಿತ್ತು. ಇದುವರೆಗೆ ಆರೋಪಿಗಳನ್ನು ಪತ್ತೆ ಹಚ್ಚಲಾಗಿಲ್ಲ. ನನ್ನಂತವರಿಗೆ ಹೀಗಾದರೆ ಹೇಗೆ?. ನಾನೇನು ಹೆದರಲ್ಲ. ನಾನು ಸಾವಿರಾರು ಜನರ ಮಧ್ಯೆ ಇರುತ್ತೇನೆ. ಹೊನ್ನಾಳಿಯಲ್ಲಿ ಮಾರಿಕಾಂಬ ಉತ್ಸವದಲ್ಲಿ ಇದ್ದೆ. ಹೊನ್ನಾಳಿ ಯುವಕರು ನನಗೆ ಬೆಂಗಾವಲಾಗಿದ್ರು.
ನನಗೆ ಹೀಗಾದ್ರೆ, ಸಾಮಾನ್ಯ ಕಾರ್ಯಕರ್ತರ ಪಾಡೇನು?. ಹಾಗಂತ ನಾನು ಸರ್ಕಾರದ ವಿರುದ್ಧ ಮಾತನಾಡುತ್ತಿಲ್ಲ. ಇಂತವರನ್ನು ಸದೆ ಬಡಿದ ಮೇಲೆ ಅವರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಹೇಳಿದರು. ಪ್ರವೀಣ್ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ಕಳುಹಿಸುತ್ತೇನೆ ಎಂದ ರೇಣುಕಾಚಾರ್ಯ ಅವರು, ಒಳ ಸಂಚುಕೋರರು ಆತ್ಮಸ್ಥೈರ್ಯ ಕುಗ್ಗಿಸ್ತಿದ್ದಾರೆ. ರಕ್ಷಣಾ ಇಲಾಖೆ ಇದನ್ನು ಹೊರಗೆ ತರಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ : ಭ್ರಷ್ಟೋತ್ಸವ ಅಂತಿದ್ದಾರೆ. ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಅವರ ವಿರುದ್ಧವೂ ಮಾತಾಡ್ತಿದ್ದಾರೆ. ಭ್ರಷ್ಟಾಚಾರ ಮಾಡಿ ತಿಹಾರ್ ಜೈಲಿಗೆ ಹೋಗಿ ಬಂದವರು. ನಿಮಗೆ ಬಿಜೆಪಿ ಬಗ್ಗೆ ಮಾತನಾಡಲು ನೈತಿಕತೆ ಇದೆಯಾ.? ಎಂದು ಡಿ. ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಭ್ರಷ್ಟಾಚಾರ ಮಾಡಿಯೇ ಜೈಲಿಗೆ ಹೋಗಿ ಬಂದಿದ್ದಿರಾ?. ಮೂರು ತಲೆಮಾರಿಗೆ ಆಗುವಷ್ಟು ಹಣ ಮಾಡಿದ್ದೇವೆ ಎಂದು ನಿಮ್ಮ ಪಕ್ಷದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರೇ ಹೇಳಿದ್ದಾರೆ. ಇಡೀ ಹಣ ಕೊಳ್ಳೆ ಹೊಡೆದಿದ್ದು ನಿಮ್ಮ ಕಾಂಗ್ರೆಸ್ ಸರ್ಕಾರ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಆಕಾಶದಿಂದ ಇಳಿದು ಬಂದವರಾ? ಎಂದು ಕಿಡಿಕಾರಿದರು.
ಕಾಂಗ್ರೆಸ್ ನವರು ಗುಜರಿ ಗಿರಾಕಿಗಳು : ಆಸ್ತಿ-ಪಾಸ್ತಿ ನಷ್ಟ ಮಾಡ್ತೀರಿ. ಗುಜರಿ ಗಿರಾಕಿಗಳು, ಗುಜರಿ ಕಾರ್ ತಂದು ಸುಡ್ತಾರೆ. ನಿಮ್ಮನ್ನು ರಾಜ್ಯದ ಜನ ಗುಜರಿಗೆ ಹಾಕ್ತಾರೆ ಎಂದು ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ನಮ್ಮ ಸಿಎಂ ರೈತರ ವಿದ್ಯಾನಿಧಿ ಅಡಿಯಲ್ಲಿ ಮಕ್ಕಳಿಗೆ ಓದಲು ಹಣ ಬಿಡುಗಡೆ ಮಾಡಿದ್ದಾರೆ. ಭ್ರಷ್ಟಾಚಾರ ಬಗ್ಗೆ ಮಾತನಾಡಲು ನಿಮಗೆ ನೈತಿಕತೆ ಇಲ್ಲ ಎಂದು ರೇಣುಕಾಚಾರ್ಯ ಹರಿಹಾಯ್ದರು.
ಓದಿ:Praveen Murder.. ಕೇಸ್ ಎನ್ಐಎಗೆ ವಹಿಸಲು ಹಿಂದೆ ಮುಂದೆ ನೋಡಲ್ಲ: ಸಿಎಂ