ಬೆಂಗಳೂರು:ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಸಿಎಂ ಸಿದ್ಧರಾಮಯ್ಯಗೆ ಮತ್ತೆ ಪತ್ರ ಬರೆದಿದ್ದು, ಜೆಸ್ಕಾಂ ಅಧಿಕಾರಿಗಳ ಜೊತೆ ಸಭೆ ನಡೆಸುವಂತೆ ಮನವಿ ಮಾಡಿದ್ದಾರೆ. ಶಾಸಕರ ಅಹವಾಲು ಕೇಳುವಂತೆ ಕೋರಿ ಕಳೆದ ಬಾರಿ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಆಗ್ರಹಿಸಿ ಪತ್ರ ಬರೆದಿದ್ದ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಇದೀಗ ಜೆಸ್ಕಾಂ ಅಧಿಕಾರಿಗಳ ಸಭೆ ಕರೆಯಲು ಒತ್ತಾಯಿಸಿ ಸಿಎಂ ಸಿದ್ಧರಾಮಯ್ಯಗೆ ಪತ್ರ ಬರೆದಿದ್ದಾರೆ. ಜೆಸ್ಕಾಂ ಅಧಿಕಾರಿಗಳು ಹಾಗೂ ಇಂಧನ ಸಚಿವರ ಜೊತೆ ಸಭೆ ನಡೆಸಲು ಮನವಿ ಮಾಡಿದ್ದಾರೆ.
ಕಲಬುರಗಿ ವಿಭಾಗದಲ್ಲಿ ಕೊಪ್ಪಳ, ಕಲಬುರ್ಗಿ, ಬೀದರ್, ರಾಯಚೂರು, ಬಳ್ಳಾರಿ, ಯಾದಗಿರಿ, ಮತ್ತು ವಿಜಯನಗರ ಜಿಲ್ಲೆಗಳು ಬರುತ್ತಿದ್ದು, ಎಲ್ಲ ಜಿಲ್ಲೆಗಳಿಗೆ ಜೆಸ್ಕಾಂ ವತಿಯಿಂದ ರೈತರ ಜಮೀನುಗಳ ನೀರಾವರಿ ಪಂಪಸೆಟ್‌ಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದರಲ್ಲಿ ಗಂಗಾ ಕಲ್ಯಾಣ ಹಾಗೂ ರೈತರ ಪಂಪಸೆಟ್‌ಗಳು ಒಳಗೊಂಡಿರುತ್ತವೆ.
ಕಳೆದ 2 ತಿಂಗಳಿನಿಂದ ಜೆಸ್ಕಾಂ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ನಿರ್ಲಕ್ಷದಿಂದ ವಿದ್ಯುತ್ ಸರಬರಾಜು ಉಪಕರಣಗಳಾದ 25KVA, 63KVA, 100KVA ಟ್ರಾನ್ಸ್ ಫಾರ್ಮಾರುಗಳ ಅಳವಡಿಕೆ ಹಾಗೂ ಬದಲಾವಣೆ ಮಾಡಲು ಆಗಿಲ್ಲ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮಗೆ ಗೊತ್ತಿರುವಂತೆ ಈ ಜಿಲ್ಲೆಗಳಲ್ಲಿ ಈ ವರ್ಷದ ಮಾನ್ಸೂನ್ ಮಳೆ ಸರಿಯಾದ ಪ್ರಮಾಣದಲ್ಲಿ ಆಗದೇ ಇರುವುದರಿಂದ ಹಾಗೂ ಮಳೆಯ ಕೊರತೆಯಿಂದ ಅಲ್ಪ-ಸ್ವಲ್ಪ ಬಿತ್ತಿಂದತಹ ರೈತರ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗುತ್ತಿವೆ. ಸದ್ಯಕ್ಕೆ ಇರುವಂತಹ ಬೆಳೆಗಳನ್ನು ರಕ್ಷಣೆ ಮಾಡುವುದರ ಸಲುವಾಗಿ ರೈತರು ಪಂಪಸೆಟ್‌ಗಳ ಮೂಲಕ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ.
ಎಲ್ಲ ರೈತರು ಏಕಾಏಕಿ ಒಂದೇ ಸಮಯದಲ್ಲಿ (ಒಟ್ಟಿಗೆ) ಪಂಪಸೆಟ್‌ಗಳನ್ನು ಚಲಾವಣೆ ಮಾಡುತ್ತಿರುವುದರಿಂದ Over Load ಆಗಿ ವಿದ್ಯುತ್ ಒದಗಿಸುವ ವಿವಿಧ ಹಂತದ ಟ್ರಾನ್ಸ್ ಫಾರ್ಮಾರುಗಳು ಸುಟ್ಟು ಹೋಗುತ್ತಿವೆ. ಮತ್ತು ಇದಲ್ಲದೇ ಕೆಲವು ಹೊಸ ಪಂಪಸೆಟ್‌ಗಳು ಗಂಗಾ ಕಲ್ಯಾಣ ಯೋಜನೆಗೆ ವಿದ್ಯುತ್ ಸರಬರಾಜು ಮಾಡಲು ಹೆಚ್ಚುವರಿಯಾಗಿ ವಿವಿಧ ಗಂತಗಳ ಟ್ರಾನ್ಸಫಾರ್ಮರುಗಳನ್ನು ಅಳವಡಿಕೆ ಮಾಡಬೇಕಾಗಿದೆ ಎಂದಿದ್ದಾರೆ.
ಅಧಿಕಾರಿಗಳು ಫೋನ್ ಸ್ವೀಕರಿಸುತ್ತಿಲ್ಲ:ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಸುಟ್ಟು ಹೋಗಿರುವಂತಹ ವಿವಿಧ ಹಂತದ ಟ್ರಾನ್ಸ್ ಫಾರ್ಮಾರುಗಳನ್ನು ತ್ವರಿತವಾಗಿ ಬದಲಾವಣೆ ಮಾಡಿರುವುದಿಲ್ಲ ಹಾಗೂ ಅವಶ್ಯಕತೆಯಿರುವಲ್ಲಿ ಹೊಸದಾಗಿ ಟ್ರಾನ್ಸಫಾರ್ಮರುಗಳನ್ನು ಅಳವಡಿಕೆ ಮಾಡಿರುವುದಿಲ್ಲ. ಈ ಬಗ್ಗೆ ಚರ್ಚಿಸಲು ಕಲಬುರಗಿಯ ಕೇಂದ್ರ ಕಚೇರಿಯಲ್ಲಿರುವ ವ್ಯವಸ್ಥಾಪಕ ನಿರ್ದೇಶಕರು ಶಾಸಕರುಗಳು ಪೋನ್ ಕಾಲ್‌ಗಳನ್ನು ಮಾಡಿದರೆ ಸ್ವೀಕರಿಸುತ್ತಿಲ್ಲ ಎಂದು ದೂರಿದ್ದಾರೆ.