ಬೆಂಗಳೂರು : ಬಿಜೆಪಿಯವರು ತಾವೇ ಬುದ್ಧಿವಂತರು ಅಂದುಕೊಂಡಿದ್ದಾರೆ. ಕೋಟಿಗಟ್ಟಲೆ ಕೆಲಸ ಆಗಿಯೇ ಇಲ್ವಾ?, ಕೆಲಸವಾಗದೇ ಇದ್ದರೂ 18 ಪರ್ಸೆಂಟ್ ಹೇಗೆ ಕೇಳಿ ಬಿಡ್ತಾರೆ?. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬುದ್ಧಿ ಸರಿಯಿಲ್ಲ ಅನಿಸುತ್ತದೆ. ಯಾವುದಕ್ಕೆ ಬಿಲ್ ತಡೆದಿದ್ದಾರೆ ಅಂತ ನೋಡಬೇಕಲ್ಲವೇ?. ಕೆಲಸವೇ ಆಗದೇ ಬಿಲ್ ಕೊಡಿ ಅಂದರೆ ಹೇಗೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಪ್ರಶ್ನಿಸಿದರು.
ಪುಟ್ಟರಂಗಶೆಟ್ಟಿ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಧಾನಮಂಡಲದ 2023-24ನೇ ಸಾಲಿನ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಮೊದಲ ಸಭೆ ಇಂದು (ಬುಧವಾರ) ನಡೆಯಿತು. ವಿಧಾನಸಭೆಯ ಪೂರ್ವ ಮೊಗಸಾಲೆಯಲ್ಲಿ ನಡೆದ ಸಭೆಯಲ್ಲಿ ಹಲವು ವಿಷಯಗಳ ಕುರಿತು ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳ ಜೊತೆ ಅಧ್ಯಕ್ಷರು ಚರ್ಚಿಸಿದರು.
ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಪುಟ್ಟರಂಗಶೆಟ್ಟಿ, ನನ್ನನ್ನು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಗೆ ಅಧ್ಯಕ್ಷನನ್ನಾಗಿ ನೇಮಕ ಮಾಡಿದ್ದಾರೆ. ಹಾಗಾಗಿ, ಇಂದು ಪ್ರಥಮ ಸಭೆ ಮಾಡಲಾಗುತ್ತಿದೆ ಎಂದು ಹೇಳಿದರು. ಅನುದಾನ ಬಿಡುಗಡೆ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಇನ್ನೂ ಯಾವುದೇ ಅನುದಾನ ಕೊಟ್ಟಿಲ್ಲ. ಐದು ಗ್ಯಾರಂಟಿ ಆದ ನಂತರ ಅನುದಾನ ಕೊಡುವುದಾಗಿ ಹೇಳಿದ್ದಾರೆ. ಕೆಲವು ವಿಶೇಷ ಅನುದಾನ ಕೊಡದೇ ಇರಬಹುದು. ಆದರೆ ಇರುವಂತ ಅನುದಾನ ಕೊಡಲೇ ಬೇಕಲ್ಲವೇ, ಕೊಡುತ್ತಾರೆ ಎಂದರು.
ಎರಡೂವರೆ ವರ್ಷದ ನಂತರ ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಮ್ಮ ಪಕ್ಷದಲ್ಲಿ ಎಲ್ಲವೂ ಹೈಕಮಾಂಡ್ ಹೇಳಿದಂತೆ ನಡೆಯುತ್ತದೆ. ಅಧಿಕಾರ ಹಂಚಿಕೆ ಹೈಕಮಾಂಡ್ಗೆ ಬಿಟ್ಟ ವಿಚಾರ. ಸಚಿವ ಮುನಿಯಪ್ಪ ಅವರು ಹೇಳಿದ್ದು ಅನ್ನೋದಕ್ಕಿಂತ ಹಿರಿಯರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಯತ್ನಾಳ್ ಲೇವಡಿ ಮಾಡಿದ ಆರ್.ಬಿ.ತಿಮ್ಮಾಪೂರ :ಪಾಪ ಯತ್ನಾಳ್ ಏನೋ ಆಗಬೇಕು ಅಂತಾನೆ ಕಷ್ಟಪಟ್ಟು ಏನೇನೋ ಮಾತಾಡುತ್ತಾರೆ. ಅವರನ್ನು ವಿರೋಧ ಪಕ್ಷದ ನಾಯಕನನ್ನಾದರೂ ಮಾಡಿದರೆ ಇನ್ನಷ್ಟು ಮಾತಾಡೋಕೆ ಅನುಕೂಲ ಆಗುತ್ತದೆ. ಬಿಜೆಪಿಯಲ್ಲಿ ಶಾಸಕರು ಗಲಾಟೆ ಮಾಡಿದ್ದರಲ್ಲ, ಅದನ್ನು ಹೇಳ್ತಿರಬೇಕು, ನಮ್ಮ ಶಾಸಕರ ಬಗ್ಗೆ ಅಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಂಗಳವಾರ ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದರು.
ಮತ್ತೊಂದೆಡೆ, ಕಾರವಾರದಲ್ಲಿ ಯತ್ನಾಳ್ ವಿರುದ್ದ ಮುಗಿಬಿದ್ದ ಮೀನುಗಾರಿಕೆ ಇಲಾಖೆ ಸಚಿವ ಮಂಕಾಳು ವೈದ್ಯ, ಬಿಜೆಪಿ ಸರ್ಕಾರವೇ ಬೀಳುವುದಾಗಿ 5 ವರ್ಷದ ಹಿಂದೆ ಹೇಳಿದ್ದರು. ಆದರೆ ಸರ್ಕಾರವನ್ನು ಬೀಳಿಸಲು ಸಾಧ್ಯವಾಗಿಲ್ಲ. ಸಿಎಂ ಕುರ್ಚಿಗೆ ಒಂದೂವರೆ ಸಾವಿರ ಕೋಟಿ ನೀಡಬೇಕು ಎಂದಿದ್ದರು. ಅವರು ಏನಾದರು ಹೇಳಲೇಬೇಕೆಂದು ಏನೋ ಹೇಳಿಕೆ ಕೊಟ್ಟಿದ್ದಾರೆ. ಅವರ ಮಾತುಗಳನ್ನು ಕೇಳಬೇಡಿ. ಅವರ ಮನಸ್ಥಿತಿ ಸರಿಯಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ :ಯತ್ನಾಳ್ ಏನೋ ಆಗ್ಬೇಕು ಅಂತ ಕಷ್ಟಪಟ್ಟು ಏನೇನೋ ಮಾತಾಡ್ತಾರೆ: ಸಚಿವ ಆರ್.ಬಿ.ತಿಮ್ಮಾಪೂರ