ಬೆಂಗಳೂರು: ಎಂಟು ಸಾರಿ ಬಜೆಟ್ ಮಂಡಿಸಿರುವ ಸಿಎಂ ಯಡಿಯೂರಪ್ಪ ಒಂದು ಕಳಪೆ ಬಜೆಟ್ ಮಂಡಿಸಿದ್ದಾರೆ ಎಂದು ಎಂಎಲ್ಸಿ ಪ್ರಕಾಶ್ ರಾಥೋಡ್ ಟೀಕಿಸಿದರು.
ವಿಧಾನ ಪರಿಷತ್ನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದೊಂದು ಸುಳ್ಳಿನ ಕಂತೆ ಹಾಗೂ ಬ್ಲಾಕ್ ಬಜೆಟ್. ಈ ಬಜೆಟ್ ವಿರೋಧಿಸುತ್ತೇನೆ. ಸಾಲದ ಬಜೆಟ್ ಇದಾಗಿದೆ. ಹಿಂದೆ ಅವರು ನೀಡಿದ್ದ ಬಜೆಟ್ನ ಖರ್ಚು ವೆಚ್ಚದ ಮಾಹಿತಿ ನೀಡಿಲ್ಲ. ಆರು ವಲಯ ಮಾಡಿ ಬಜೆಟ್ ಮಂಡಿಸಿದ್ದು, ಪಾರದರ್ಶಕತೆಯ ಕೊರತೆ ಕಾಣುತ್ತಿದೆ. ದೇಶದ ಜಿಡಿಪಿ 7.5ರಷ್ಟು ಕುಸಿದಿದೆ, ಕುಸಿಯುತ್ತಿದೆ. ಹೀಗಿರುವಾಗ ಜಿಡಿಪಿ ಹೆಚ್ಚಳ ಮಾಡುತ್ತೇವೆ ಎಂದಿದ್ದಾರೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಕ್ಕೂ ಅನ್ಯಾಯವಾಗಿದೆ. ಬಜೆಟ್ನಲ್ಲಿ ಎಲ್ಲಾ ಕಡಿಮೆ ಮಾಡಿ ಸಿಎಂ ಜನರ ದಾರಿ ತಪ್ಪಿಸುತ್ತಿದ್ದಾರೆ. ಮುಚ್ಚುಮರೆ ಸರ್ಕಾರ ನಡೆಯುತ್ತಿದೆ. ಮುಚ್ಚಿಟ್ಟಿದ್ದು ಜಾಸ್ತಿ, ಬಿಚ್ಚಿಟ್ಟಿದ್ದು ಕಡಿಮೆ. ಎಲ್ಲಾ ವಲಯಕ್ಕೂ ಅನುದಾನ ಕಡಿಮೆ ಮಾಡಲಾಗಿದೆ. ಸಂಕಷ್ಟದಲ್ಲಿರುವ ನೂರಾರು ರೈತರಿಗೆ ಅನ್ಯಾಯ ಮಾಡಲಾಗಿದೆ. ಬಜೆಟ್ ಗಾತ್ರ ತಗ್ಗಿಸಿ ಪರಿಶಿಷ್ಟ ಜಾತಿ, ಪಂಗಡಗಳಿಗೆ ಅನ್ಯಾಯ ಮಾಡಲಾಗಿದೆ. ಎಸ್ಸಿ, ಎಸ್ಟಿಗಳಿಗೆ ಅನ್ಯಾಯವಾಗುತ್ತಿದೆ. ಅನುದಾನ ನೀಡಿದ್ದನ್ನೂ ವಾಪಸ್ ಪಡೆಯಲಾಗಿದೆ. ಹೇಳುವುದು ಒಂದು, ಮಾಡುವುದು ಮತ್ತೊಂದು ಆಗಿದೆ ಎಂದರು.