ಕರ್ನಾಟಕ

karnataka

ETV Bharat / state

ಕೋರ್ಟ್​ಗೆ ಹಾಜರಾದ ಶಾಸಕ ನಾಗೇಂದ್ರ: ಇಲ್ಲೂ ಬಿಡದ ರಾಜಕೀಯ ನಾಯಕರು! - undefined

ಇಂದು ಕೋರ್ಟ್​ಗೆ ಹಾಜರಾದ ನಾಗೇಂದ್ರ ಅವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ಹೊರಗೆ ಕೂರಿಸಿದ್ದರು. ಈ ವೇಳೆ ಕಾಂಗ್ರೆಸ್ ಶಾಸಕ ಮುನಿರತ್ನ ಅವರು ನಾಗೇಂದ್ರರನ್ನು ಭೇಟಿ ಮಾಡಿ ರಾಜಕೀಯ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಿದರು. ಬಳಿಕ ಬಿಜೆಪಿ ಶಾಸಕ ಸಿ.ಪಿ. ಯೋಗೀಶ್ವರ್ ಆಗಮಿಸಿ ನಾಗೇಂದ್ರರನ್ನು ಭೇಟಿ ಮಾಡಿ ಸುದ್ದಿಗಾರರ ಎದುರೇ ಚರ್ಚೆ ನಡೆಸಿದ್ರು.

ನಾಗೇಂದ್ರ

By

Published : Jul 1, 2019, 6:58 PM IST

ಬೆಂಗಳೂರು: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಹೊರಗಿನ ಆವರಣ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಚರ್ಚೆಗೆ ವೇದಿಕೆಯಾಗಿತ್ತು. ಖಾಸಗಿ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಎರಡು-ಮೂರು ಬಾರಿ ನೋಟಿಸ್ ನೀಡಿದ್ದರೂ ನಾಗೇಂದ್ರ ಕೋರ್ಟ್​ಗೆ ಗೈರು ಹಾಜರಾಗಿದ್ದರು. ಆದರೆ, ಇಂದು ಕೋರ್ಟ್​ಗೆ ಹಾಜರಾದ ನಾಗೇಂದ್ರ ಅವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ಅವರನ್ನು ಕೋರ್ಟ್ ಹೊರಗೆ ಕೂರಿಸಿದ್ದರು. ಆ ವೇಳೆಗೆ ಅಗಮಿಸಿದ್ದ ಕಾಂಗ್ರೆಸ್ ಶಾಸಕ ಮುನಿರತ್ನ ಅವರು ನಾಗೇಂದ್ರರನ್ನು ಭೇಟಿ ಮಾಡಿ ರಾಜಕೀಯ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಿದ್ರು.

ಮುನಿರತ್ನ ಅಲ್ಲಿಂದ ತೆರಳಿದ ಸ್ವಲ್ಪ ಹೊತ್ತಿನಲ್ಲೇ ಮಾಜಿ ಶಾಸಕ ಸಿ.ಪಿ. ಯೋಗೀಶ್ವರ್ ಆಗಮಿಸಿ ನಾಗೇಂದ್ರರನ್ನು ಭೇಟಿ ಮಾಡಿದರು. ಈ ವೇಳೆ ಸುದ್ದಿಗಾರರ ಎದುರೇ ಚರ್ಚೆ ನಡೆಸಿದರು. ‘ನಿನಗೂ ಒಂದು ಅವಕಾಶವಿದೆ. ರಾತ್ರಿ ಪೂರ್ತಿ ನಿದ್ದೆ ಬಿಟ್ಟು ಯೋಚನೆ ಮಾಡು. ನೀನು ಸಚಿವನಾಗುತ್ತೀಯಾ’ ಎಂದು ಬೆನ್ನುತಟ್ಟಿ ನಗುಮುಖದಲ್ಲಿ ಹೇಳಿದ ಯೋಗೀಶ್ವರ್ ಅವರಿಗೆ ಪ್ರತ್ಯುತ್ತರ ನೀಡಿದ ನಾಗೇಂದ್ರ, ‘ಬೇಡ ಸರ್, ಯಾವ ಯೋಚನೆನೂ ಇಲ್ಲ. ಸದ್ಯ ನಾನು ಇಲ್ಲೇ ಆರಾಮಾಗಿ ಇದ್ದೇನೆ, ಇಲ್ಲೇ ಇರುತ್ತೇನೆ ಅಂದ್ರು.

ಯೋಗೀಶ್ವರ್ ಅವರ ಈ ಹೇಳಿಕೆ ಭಾರಿ ಕುತೂಹಲ ಮೂಡಿಸಿದೆ. ಇದಕ್ಕೂ ಮುನ್ನ ಅಮೆರಿಕದಲ್ಲಿರುವ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ವಾಟ್ಸ್ಯಾಪ್​ ಕರೆ ಮಾಡಿ ನಾಗೇಂದ್ರ ಅವರ ಜೊತೆ ಕೆಲ ಸಮಯ ಮಾತನಾಡಿದರು. ಇದಾದ ಬಳಿಕ ರಾಜಕೀಯ ಬೆಳವಣಿಗೆ ಕುರಿತು ಕ್ಯಾಮರಾ ಮುಂದೆ ಪ್ರತಿಕ್ರಿಯೆ ನೀಡಲು ಶಾಸಕ ನಾಗೇಂದ್ರ ನಿರಾಕರಿಸಿದರು.

ಇಂದು ಬೆಳಗ್ಗೆಯಿಂದಲೇ ರಾಜ್ಯ ರಾಜಕೀಯ ವಿದ್ಯಮಾನಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ನಾಗೇಂದ್ರರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ.

ರಾಜೀನಾಮೆ ಕೊಡುವ ಮಾತಿಲ್ಲ:

ನಾನು ರಾಜೀನಾಮೆ ಕೊಡುವ ಮಾತೇ ಇಲ್ಲ. ಆನಂದ್ ಸಿಂಗ್ ರಾಜೀನಾಮೆ ಕೊಟ್ಟಿರುವುದು ಅವರ ವೈಯಕ್ತಿಕ ವಿಚಾರವೆಂದು ಸುದ್ದಿಗಾರರ ಬಳಿ ಹೇಳಿ ನಾಗೇಂದ್ರ ಕೋರ್ಟ್​ ಆವರಣದಿಂದ ತೆರಳಿದರು.

ಈ ನಡುವೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ರಾಮಚಂದ್ರ ಹುದ್ದಾರ್ ಅವರ ಎದುರು ಹಾಜರಾದ ನಾಗೇಂದ್ರ ಅವರು, ಇನ್ಮುಂದೆ ವಿಚಾರಣೆಗೆ ಗೈರುಹಾಜರಾಗುವುದಿಲ್ಲ ಎಂದು ಮನವಿ ಮಾಡಿದರು. ಆಗ ನ್ಯಾಯಾಧೀಶರು, ಪೊಲೀಸ್ ಕಸ್ಟಡಿಯಿಂದ ತೆರವುಗೊಳಿಸಿ ವಿಚಾರಣೆಯನ್ನು ಮುಂದೂಡಿದರು.

For All Latest Updates

TAGGED:

ABOUT THE AUTHOR

...view details