ಬೆಂಗಳೂರು:ನಾನು ಇಂದು ಹಾಗೂ ಮುಂದೆಯೂ ಕಾಂಗ್ರೆಸ್ಸಿಗನೇ.. ರಾಜೀನಾಮೆ ಕುರಿತಾಗಿ ಈವರೆಗೂ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಿಂದ ನಿರ್ಗಮಿಸುವ ವೇಳೆ ಮಾಧ್ಯಮಗಳೊಂದಿಗೆ ಮಾತಾನಡಿದ ಅವರು, ನಾನು ಕಾಂಗ್ರೆಸ್ನಲ್ಲಿಯೇ ಇದ್ದೇನೆ. ಸಂಧಾನ ಸಭೆಯಲ್ಲಿ ಎಲ್ಲಾ ಚೆನ್ನಾಗಿ ನಡೆದಿದೆ. ಸಿದ್ದರಾಮಯ್ಯ ಎಲ್ಲಾ ಒಳ್ಳೆಯದನ್ನೇ ಹೇಳಿದ್ದಾರೆ. ರಾಜೀನಾಮೆ ಹಿಂಪಡೆಯುವ ವಿಚಾರದ ಕುರಿತು ಈವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದ ಅವರು, ತಮ್ಮೊಂದಿಗೆ ರಾಜೀನಾಮೆ ನೀಡಿದ ಚಿಕ್ಕಬಳ್ಳಾಪುರ ಶಾಸಕ ಡಾ. ಕೆ ಸುಧಾಕರ್ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಸೂಚನೆ ನೀಡಿದರು.
ಸಿದ್ದರಾಮಯ್ಯ ನಿವಾಸದಿಂದ ನಿರ್ಗಮಿಸುತ್ತಿರುವ ಎಂಟಿಬಿ ನಾಗರಾಜ್ ಸಫಲವಾಯ್ತು ಮ್ಯಾರಥಾನ್ ಸಭೆ:
ನಾಗರಾಜ್ ಅವರ ಮನವೊಲಿಸುವ ಸಲುವಾಗಿ ಬೆಳಗ್ಗಿನಿಂದಲೇ ನಡೆದ ಮ್ಯಾರಥಾನ್ ಸಭೆ ಸಫಲವಾಯಿತಾ ಎನ್ನುವ ಅನುಮಾನ ಕಾಡಿದ್ದು, ಇನ್ನೊಂದೆಡೆ ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಒಳಗಾಗಿ ರಾಜೀನಾಮೆ ಹಿಂಪಡೆಯುವ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ಮೊಬೈಲ್ ಸ್ವಿಚ್ ಆಫ್ ಮಾಡಿ ಅಜ್ಞಾತ ಸ್ಥಳದಲ್ಲಿರುವ ಸುಧಾಕರ್ ಅವರು, ಸಂಪರ್ಕಕ್ಕೆ ಸಿಕ್ಕರೆ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಯೋಚನೆ ಮಾಡಿದ್ದಾರೆ. ಶಾಸಕರ ರಾಜೀನಾಮೆ ವಿಚಾರ ಸದ್ಯ ಸುಪ್ರೀಂ ಅಂಗಳದಲ್ಲಿದೆ. ಈ ಸಂದರ್ಭದಲ್ಲಿ ನಿರ್ಧಾರ ಬದಲಿಸಿದೆ, ಬೇರೆ ಯಾವುದಾದರೂ ರೀತಿಯ ಸಮಸ್ಯೆ ಉದ್ಭವಿಸಬಹುದೇ ಎಂಬುದರ ಕುರಿತು ಎಂಟಿಬಿ ಯೋಚಿಸುತ್ತಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಇಲ್ಲಿಂದ ತೆರಳಿರುವ ನಾಗರಾಜ್ ಡಾ. ಕೆ. ಸುಧಾಕರ್ ಭೇಟಿಗೆ ತೆರಳಿದ್ದಾರೆ ಎಂಬ ಮಾಹಿತಿ ಇದೆ. ಇನ್ನೊಂದೆಡೆ ಒಂದು ಹಂತಕ್ಕೆ ಮನವೊಲಿಕೆ ಮಾಡಿರುವ ನಾಯಕರು ನಾಗರಾಜ್ ಅವರನ್ನು ಅಜ್ಞಾತ ಸ್ಥಳಕ್ಕೆ ಇಲ್ಲವೇ ಯಾವುದೋ ರೆಸಾರ್ಟ್ಗೆ ಕರೆದೊಯ್ದಿದ್ದಾರೆ ಎಂಬ ಮಾಹಿತಿ ಇದೆ.