ಬೆಂಗಳೂರು: ನಾನು ನಿರ್ಮಾಣ ಮಾಡಿದ ಸಿನಿಮಾವನ್ನು ಡಿ.ಕೆ.ಸುರೇಶ್ ಅವರ ಬಾಕ್ಸ್ನಲ್ಲಿ ತೆಗೆದುಕೊಂಡು ಟೆಂಟ್ನಲ್ಲಿ ಹಾಕಿದ್ದಾರೆ ಎಂದು ಆರ್.ಆರ್.ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಟಾಂಗ್ ಕೊಟ್ಟರು. ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರ ನೀಡಿದ ಅನುದಾನವನ್ನು ರದ್ದುಗೊಳಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ನಡೆಸುತ್ತಿದ್ದ ಮೌನ ಪ್ರತಿಭಟನೆ ವಾಪಸ್ ಪಡೆದ ನಂತರ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ಮುನಿರತ್ನ ದೊಡ್ಡ ಸಿನಿಮಾ ನಿರ್ಮಾಪಕ. ಏನೆಲ್ಲಾ ಸ್ಕ್ರಿಪ್ಟ್ ತಯಾರಿಸಿದ್ದಾರೋ ನೋಡೋಣ ಎಂಬ ಡಿ.ಕೆ.ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ನನ್ನ ಸಿನಿಮಾವನ್ನು (ನನ್ನ ಕ್ಷೇತ್ರದ ಅನುದಾನವನ್ನು) ಬೇರೆ ಥಿಯೇಟರ್ಗೆ (ಕ್ಷೇತ್ರಕ್ಕೆ) ಹಾಕಿದ್ದಾರೆ. 126 ರೀಲ್ ಅನ್ನ ಬೇರೆ ಕಡೆ ರಿಲೀಸ್ ಮಾಡಿದ್ದಾರೆ. (126 ಕೋಟಿ ರೂ ಅನುದಾನವನ್ನು ಬೇರೆ ಕ್ಷೇತ್ರಕ್ಕೆ). ಅವರು ಹಂಚಿಕೆದಾರರು, ಅವರು ಬೇರೆ ಕಡೆ ರಿಲೀಸ್ ಮಾಡಿದ್ದಾರೆ ಎಂದು ತಿರುಗೇಟು ಕೊಟ್ಟರು.
ಎರಡು ಗಂಟೆಯವರೆಗೆ ನಾನು ಉಪವಾಸ ಸತ್ಯಾಗ್ರಹ ಮಾಡಬೇಕಿತ್ತು. ಆದರೆ ಯಡಿಯೂರಪ್ಪ ನನ್ನ ಜೊತೆಗೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಉಪವಾಸ ಸತ್ಯಾಗ್ರಹ ಇಲ್ಲಿಗೆ ಕೈಬಿಡುತ್ತೇನೆ ಎಂದರು.
ನಮ್ಮ ಕ್ಷೇತ್ರದಲ್ಲಿ ಗಾಂಜಾ ಮಾರಾಟ ಹೆಚ್ಚಾಗ್ತಿದೆ. ಪೊಲೀಸ್ ಅಧಿಕಾರಿಗಳ ಜೊತೆ ಸೆಲ್ಫಿ ತಗೋತಾರೆ ಎಂದು ನನ್ನ ವಿರುದ್ಧ ಗಂಭೀರ ಆರೋಪ ಮಾಡಿದರು. ನಾನು ಹೇಳಿದ ಕೆಲಸ ಆಗಿಲ್ಲ ಅಂದ್ರೆ ಎಂಪಿ ಹತ್ರ ಕಾಲ್ ಮಾಡಿಸ್ಲಾ ಅಥವಾ ಡಿಸಿಎಂ ಅವರಿಂದ ಫೋನ್ ಮಾಡಿಸ್ಲಾ ಅಂತ ಕೇಳ್ತಾರೆ. ನಾನು ಏನು ಮಾಡಲಿ?. ಆರ್.ಆರ್.ನಗರ ಕ್ಷೇತ್ರದಲ್ಲಿ ಸೋತಿರುವ ಅಭ್ಯರ್ಥಿ ಏನೇ ಹೇಳಿದ್ರೂ ಕೆಲಸ ಆಗುತ್ತದೆ ಎಂದು ಕಿಡಿಕಾರಿದರು.