ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಚನ ಭ್ರಷ್ಟ ಅಲ್ಲ. ಮಾತು ತಪ್ಪಲ್ಲ. ಕೆಲವು ಸಂದರ್ಭಗಳಲ್ಲಿ ಹೀಗೆ ಆಗುತ್ತದೆ. ಮುಖ್ಯಮಂತ್ರಿ ವಿರುದ್ಧ ಮಾತನಾಡಿದರೆ ಪಕ್ಷಕ್ಕೆ ಕೆಟ್ಟದು ಮಾಡಿದ ಹಾಗೆ ಆಗುತ್ತದೆ. ಸಚಿವ ಸ್ಥಾನ ಸಿಗಲಿಲ್ಲ ಅಂತ ಕೆಟ್ಟದಾಗಿ ಮಾತಾಡಬಾರದು ಎಂದು ಸಚಿವ ಸ್ಥಾನ ವಂಚಿತ ಶಾಸಕ ಮುನಿರತ್ನ ಹೇಳಿದ್ದಾರೆ.
ವೈಯಾಲಿಕಾವಲ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ಅಲ್ಲಿಂದ ಆದೇಶ ಬರುವುದು ವಿಳಂಬ ಆಗಬಹುದು. ನಾನು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದೇನೆ. ಸಚಿವ ಸ್ಥಾನ ಸಿಗಲಿ, ಸಿಗದೇ ಇರಲಿ. ಶಾಸಕನಾಗಿ ನಾನು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. ಕಾರ್ಯಕರ್ತರನಾಗಿ ಪಕ್ಷದಲ್ಲಿ ಮುಂದುವರೆಯುತ್ತೇನೆ ಎಂದರು.
ಗೌರವಯುತವಾಗಿ ಮಾತಾಡುವುದಕ್ಕೆ ಸಿಎಂ ಎಲ್ಲಾ ಅವಕಾಶ ಮಾಡಿಕೊಡುತ್ತಿದ್ದಾರೆ. ಕೆಲಸ ಮಾಡಿಸಿಕೊಳ್ಳಲು ಅವಕಾಶ ಕೊಟ್ಟಿದ್ದಾರೆ. ಆದರೂ ಪದೇ ಪದೆ ಮಾಧ್ಯಮಗಳಲ್ಲಿ ಮಾತನಾಡುತ್ತಿದ್ದರೆ ಮುಖ್ಯಮಂತ್ರಿಗಳು ಇನ್ನೇನು ಹೇಳಲು ಸಾಧ್ಯ. ಹೈಕಮಾಂಡ್ ಬಳಿ ಹೋಗಿ ಎನ್ನಬೇಕು. ಅದನ್ನೇ ಹೇಳಿದ್ದಾರೆ. ಪಕ್ಷಕ್ಕೆ ಮುಜುಗರ ತರುವ ಕೆಲಸವನ್ನು ಯಾರೂ ಮಾಡಬಾರದು. ಸಚಿವ ಸ್ಥಾನ ನನ್ನ ಹಣೆಯಲ್ಲಿ ಬರೆದಿದ್ದರೆ ಸಿಗುತ್ತದೆ. ಇಲ್ಲ ಅಂದರೆ ಇಲ್ಲ ಎಂದರು.
ನನ್ನ ಜೊತೆಗೆ ಬಂದವರು ಎಲ್ಲಾ ಬ್ಯುಸಿ ಇದ್ದಾರೆ. ಅವರು ಹುಬ್ಬಳ್ಳಿ , ಧಾರವಾಡ ಎಲ್ಲಾ ಕಡೆ ಬ್ಯುಸಿ ಇದ್ದಾರೆ. ಯಾರಿಗೂ ಮಾತಾಡುವುದಕ್ಕೆ ಸಮಯ ಇಲ್ಲ. ಎಲ್ಲ ಬ್ಯುಸಿ ಇದ್ದಾರೆ. ನನ್ನ ಜೊತೆ ಬಂದು ಸಚಿವರಾದವರು ಬಿಜೆಪಿ ಪಕ್ಷಕ್ಕೆ ತುಂಬಾ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ ಎಂದು ಮಿತ್ರಮಂಡಳಿ ಸದಸ್ಯರ ಬಗ್ಗೆ ವ್ಯಂಗ್ಯವಾಡಿದರು.
ಅರುಣ್ ಸಿಂಗ್ ಅವರು ಕಾರಣಾಂತರಗಳಿಂದ ವಿಳಂಬ ಆಗಿದೆ ಎಂದು ಹೇಳಿದ್ದಾರೆ. ಸಚಿವ ಸ್ಥಾನ ಇಲ್ಲ ಅಂತ ಚಿಂತೆ ಇಲ್ಲ. ಅರುಣ್ ಸಿಂಗ್ ಬಳಿ ನನಗೆ ಸಚಿವ ಸ್ಥಾನ ಬೇಕು ಎಂದು ಕೇಳಿಲ್ಲ. ಮಾತು ಕೊಟ್ಟಿದ್ದಾರೆ ಎಂದು ದುರುಪಯೋಗ ಮಾಡಿಕೊಳ್ಳಬಾರದು. ಬೇರೆಯವರಿಗೂ ನಮಗೂ ಹೋಲಿಕೆ ಮಾಡಿಕೊಳ್ಳಬಾರದು. ಕೆಲವು ಸಂದರ್ಭಗಳಲ್ಲಿ ಕೆಟ್ಟ ಸಮಯ ಬರುತ್ತದೆ. ಏನೂ ಮಾಡುವುದಕ್ಕೆ ಆಗಲ್ಲ. ಮಳೆ, ಗಾಳಿ, ಚಳಿ ಎಲ್ಲ ಇರುತ್ತದೆ. ಎಲ್ಲದಕ್ಕೂ ಹೊಂದಿಕೊಂಡು ಹೋಗುತ್ತೇವೆ. ಅದರಂತೆ ರಾಜಕೀಯದಲ್ಲಿಯೂ ಹೊಂದಿಕೊಂಡು ಹೋಗಬೇಕು. ನನ್ನ ಜನ ನಾನು ಸಚಿವ ಆಗುತ್ತೇನೆ ಎಂದು ಮತ ಹಾಕಿರಲಿಲ್ಲ. ಶಾಸಕನನ್ನಾಗಿ ಆಯ್ಕೆ ಮಾಡಲು ಮತ ಹಾಕಿದ್ದಾರೆ. ನಾನು ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದರು.