ಬೆಂಗಳೂರು:ನಮ್ಮ ಜೊತೆ 120 ಶಾಸಕರಿದ್ದು, ದೆಹಲಿಗೆ ಹೋಗಿ ನಾವು ನಾಯಕರನ್ನು ಭೇಟಿ ಮಾಡಿ ದೂರು ಕೊಡುತ್ತೇವೆ ಎಂದು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ತಿಳಿಸಿದ್ದಾರೆ. ಇದೇ ವೇಳೆ ಶಾಸಕ ಬಸನಗೌಡ ಪಾಟೀಲ್ ವಿರುದ್ಧ ಅವರು ಗರಂ ಆಗಿದ್ದಾರೆ.
ಸಿಎಂ ವಿರುದ್ಧ ಮಾತನಾಡ್ತಿರುವ ಯತ್ನಾಳ್ ಮೊದಲು ರಾಜೀನಾಮೆ ಕೊಡಲಿ: ರೇಣುಕಾಚಾರ್ಯ ಗರಂ ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ರೂ ಪದೇಪದೆ ಪಕ್ಷದ ವಿರುದ್ಧ ಮಾತನಾಡ್ತಾರೆ. ಬಸನಗೌಡ ಪಾಟೀಲ ಯತ್ನಾಳ್ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿ, ಆಮೇಲೆ ಮಾತನಾಡಲಿ ಎಂದರು.
ರಾಜಕಾರಣದ ಬಗ್ಗೆ ಅಸಹ್ಯವಾಗ್ತಿದೆ. ದೆಹಲಿಗೆ ಹೋಗಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ, ವಿರೋಧಿ ಶಾಸಕರನ್ನು ಉಚ್ಚಾಟನೆ ಮಾಡುವಂತೆ ಒತ್ತಡ ಹಾಕುತ್ತೇವೆ. ಪಕ್ಷದಲ್ಲಿ ಕೆಲವರು ಗೊಂದಲ ಮೂಡಿಸುತ್ತಿದ್ದಾರೆ. ಶಾಸಕರೆಲ್ಲ ಇವತ್ತು ಸಭೆ ಮಾಡಿ, ಚರ್ಚಿಸಿ ದೆಹಲಿಗೆ ಹೋಗುವ ಬಗ್ಗೆ ನಿರ್ಧರಿಸುತ್ತೇವೆ ಎಂದು ರೇಣುಕಾಚಾರ್ಯ ಹೇಳಿದ್ರು.
ನಮ್ಮ ಹೈಕಮಾಂಡ್ ಬಹಳ ಸ್ಟ್ರಾಂಗ್ ಇದೆ. ಸಿಎಂ ಶಾಸಕಾಂಗ ಪಕ್ಷದ ಸಭೆ, ವಿಭಾಗವಾರು ಸಭೆಯನ್ನೂ ನಡೆಸಿದ್ದಾರೆ. ಸಿಎಲ್ಪಿ ಕರೆಯುವ ಅವಶ್ಯಕತೆಯಿಲ್ಲ. ಸಿಎಂ ಬಳಿ ಹೋಗಿದ್ದು ಅನುದಾನ ಕೇಳಲು ಅಷ್ಟೇ ಎಂದು ಸ್ಪಷ್ಟಪಡಿಸಿದರು. ಬೆಂಗಳೂರಿಗೆ ಬಂದಾಗ ಸಿಎಂ ಭೇಟಿ ಮಾಡಿ ಕೊರೊನಾ, ಅಭಿವೃದ್ಧಿ ಕುರಿತಂತೆ ಚರ್ಚೆ ಮಾಡುತ್ತೇವೆ. ದೆಹಲಿಗೆ ಹೋಗುವ ಬಗ್ಗೆಯೂ ನಾವು ಮಾತನಾಡಿದ್ದೇವೆ. ಯಡಿಯೂರಪ್ಪ ಪಕ್ಷ ಕಟ್ಟಿ ಬೆಳೆಸಿದವರು. ಯಡಿಯೂರಪ್ಪ ವಿರುದ್ಧ ಮಾತನಾಡಿದರೆ ಒಪ್ಪಲ್ಲ. ಮಾತನಾಡುವವರು ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ಯಡಿಯೂರಪ್ಪ ಟೀಕೆ ಮಾಡುವುದು ಒಂದೇ, ಪಕ್ಷದ ವಿರುದ್ಧ ಮಾತನಾಡುವುದು ಒಂದೇ ಎಂದು ಯತ್ನಾಳ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.