ಬೆಂಗಳೂರು:ಕುಮಾರ ಸ್ವಾಮಿಯವ್ರೇ ನೀವ್ಯಾಕೆ ಸಂಘ ಪರಿವಾರದ ಕಾರ್ಯಕರ್ತರನ್ನು ಹಿಟ್ಲರ್ಗೆ ಹೋಲಿಸುತ್ತೀರಿ?. ಯಾರೂ ಸಹ ಬಲವಂತವಾಗಿ ದೇಣಿಗೆ ಸಂಗ್ರಹಿಸುತ್ತಿಲ್ಲ. ಬಲವಂತವಾಗಿ ದೇಣಿಗೆ ಸಂಗ್ರಹ ಮಾಡುತ್ತಿದ್ದರೆ ದೂರು ಕೊಡಿ ಎಂದು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸವಾಲೆಸೆದಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮನೆಗಳಿಗೆ ಮಾರ್ಕ್ ಮಾಡುತ್ತಿದ್ದರೆ ಎಲ್ಲಿ ಅಂತ ತೋರಿಸಿ. ದಾಖಲೆ ಕೊಡಿ. ವಿಷಯಾಂತರ ಮಾಡಬೇಡಿ. ರಾಮ ಮಂದಿರ ನಿರ್ಮಾಣ ಬಹಳ ವರ್ಷಗಳ ಕನಸು. ಬಿಜೆಪಿ ಯಾವತ್ತೂ ವೋಟ್ ಬ್ಯಾಂಕ್ ರಾಜಕಾರಣ ಮಾಡಿಲ್ಲ. ವಿನಾ ಕಾರಣ ಆರೋಪ ಮಾಡೋದು ಸರಿಯಲ್ಲ. ರಾಮ ಮಂದಿರ ದೇಣಿಗೆಯಲ್ಲಿ ಒಂದು ರೂಪಾಯಿ ಸಹ ವ್ಯತ್ಯಾಸ ಆಗಲ್ಲ. ನೀವೂ ದೈವ ಭಕ್ತರು. ನೀವು ಸಹ ರಾಮ ಮಂದಿರಕ್ಕೆ ಉದಾರವಾಗಿ ದೇಣಿಗೆ ಕೊಡಿ. ದೇಣಿಗೆ ಕೊಟ್ಟು ರಾಮನ ಕೃಪೆಗೆ ಪಾತ್ರರಾಗಿ ಎಂದು ಮನವಿ ಮಾಡಿದರು.
ಇಂತಹ ಹೇಳಿಕೆ ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ದೇಣಿಗೆ ಸಂಗ್ರಹ ಮಾಡುವವರು ಅನುಮಾನಾಸ್ಪದವಾಗಿ ಕಂಡು ಬಂದರೆ ಪೊಲೀಸರಿಗೆ ದೂರು ಕೊಡಿ. ದೇಣಿಗೆಗಾಗಿ ಧಮ್ಕಿ ಹಾಕಿದ್ದರೆ, ಬಲವಂತ ಮಾಡಿದ್ದರೆ ಪಕ್ಷದ ವತಿಯಿಂದ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಜನ ಉದಾರವಾಗಿ ದೇಣಿಗೆ ನೀಡುತ್ತಿದ್ದಾರೆ. ವಿನಾ ಕಾರಣ ವಿವಾದ ಸೃಷ್ಟಿಸಬೇಡಿ ಎಂದರು.
ಅಹಿಂದ ಸಮಾವೇಶಕ್ಕೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ದೇಶ, ರಾಜ್ಯದಲ್ಲಿ ಸೋತು ಸುಣ್ಣವಾಗಿದೆ. ಕಾಂಗ್ರೆಸ್ ಅಹಿಂದ ಪರ ಇಲ್ಲ. ಬಿಜೆಪಿ ಅಹಿಂದ ವರ್ಗಕ್ಕೆ ಹಲವು ಉತ್ತಮ ಕೆಲಸ ಮಾಡಿಕೊಟ್ಟಿದೆ. ಬಿಜೆಪಿ ಮುಂದೆ ಕಾಂಗ್ರೆಸ್ನ ಅಹಿಂದ ಸಮಾವೇಶಗಳು ವರ್ಕೌಟ್ ಆಗಲ್ಲ. ಕಾಂಗ್ರೆಸ್ ಅಧಿಕಾರದಲ್ಲಿಲ್ಲ. ಅಧಿಕಾರಕ್ಕೆ ಬರುವುದೂ ಇಲ್ಲ ಎಂದರು.