ಬೆಂಗಳೂರು: ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಗೆದ್ದು ಬಂದ ಶಾಸಕರಲ್ಲಿ ಸಚಿವ ಸ್ಥಾನ ವಂಚಿತಗೊಂಡ ಮಹೇಶ್ ಕುಮಟಳ್ಳಿ ಜೊತೆ ನೂತನ ಸಚಿವ ರಮೇಶ್ ಜಾರಕಿಹೊಳಿ ಸಿಎಂ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು.
ಬೀದರ್ ಜಿಲ್ಲಾ ಪ್ರವಾಸ ಮುಗಿಸಿ ಬೆಂಗಳೂರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗಮಿಸುತ್ತಿದ್ದಂತೆ ಡಾಲರ್ಸ್ ಕಾಲೋನಿ ನಿವಾಸಕ್ಕೆ ನೂತನ ಸಚಿವ ರಮೇಶ್ ಜಾರಕಿಹೋಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಜೊತೆ ಸಚಿವ ಸ್ಥಾನ ವಂಚಿತ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಆಗಮಿಸಿದರು.
ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ತಪ್ಪಿದ ಕುರಿತು ಮಾತುಕತೆ ನಡೆಸಿದರು. ಈ ವೇಳೆ ನಮ್ಮನ್ನು ನಂಬಿ ಬಂದವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಕುಮಟಳ್ಳಿ ಅವರಿಗೂ ಸೂಕ್ತ ಸ್ಥಾನಮಾನ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಇನ್ನು ಪ್ರಮುಖ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಇಲ್ಲವೇ, ಸಂಪುಟ ದರ್ಜೆ ಸ್ಥಾನಮಾನದ ಹುದ್ದೆಯನ್ನು ಶಾಸಕ ಕುಮಟಳ್ಳಿಗೆ ನೀಡುವ ಭರವಸೆಯನ್ನು ಸಿಎಂ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಜಾರಕಿಹೊಳಿ ಸಹೋದರರು ಹಾಗು ಶಾಸಕ ಮಹೇಶ್ ಕುಮಟಳ್ಳಿ ನಿರ್ಗಮದ ನಂತರ ಸಿಎಂ ನಿವಾಸಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗು ಸಚಿವ ವಿ.ಸೋಮಣ್ಣ ಭೇಟಿ ನೀಡಿ ಮಾತುಕತೆ ನಡೆಸಿದರು. ಸಚಿವ ಸಂಪುಟ ವಿಸ್ತರಣೆ ನಂತರದ ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಸಿದರು.