ಬೆಂಗಳೂರು:ಹರಪನಹಳ್ಳಿ ಸ್ವತಂತ್ರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ್ಗೆ ಕಿಸಾನ್ ಕಾಂಗ್ರೆಸ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಭಾನುವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ ಲತಾ ಅವರು ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಯಾವುದೇ ಶರತ್ತು ಇಲ್ಲದೆ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಮುಂಬರುವ ದಿನಗಳಲ್ಲಿ ಪಕ್ಷದ ಏಳಿಗೆಗೆ ಶ್ರಮಿಸುವುದಾಗಿ ಹೇಳಿದ್ದಾರೆ.
ಇವರು ರಾಷ್ಟ್ರೀಯ ಕಿಸಾನ್ ಕಾಂಗ್ರೆಸ್ ಪದಾಧಿಕಾರಿ ಹಿನ್ನೆಲೆಯಲ್ಲಿ ಹರಪನಹಳ್ಳಿ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಕೇಳಿದ್ದು, ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಸ್ಪರ್ದಿಸಿ 14 ಸಾವಿರ ಮತಗಳಿಂದ ಜಯ ಗಳಿಸಿದ್ದಾರೆ. ಇವರಲ್ಲದೇ ಕಿಸಾನ್ ಕಾಂಗ್ರೆಸ್ ಪದಾಧಿಕಾರಿಗಳಾದ ಬಸವರಾಜ್ ವಿ ಶಿವಗಂಗಾ ಚನ್ನಗಿರಿ ಇಂದ 18 ಸಾವಿರ ಮತಗಳಿಂದ ಜಯಗಳಿಸಿದ್ದಾರೆ.
ಕುಡಚಿಯಿಂದ ಮಹೇಂದ್ರ ತಮ್ಮಣ್ಣವರ್ 25 ಸಾವಿರ ಮತಗಳಿಂದ ಜಯಗಳಿಸಿದ್ದಾರೆ. ತೇರದಾಳ ಅಭ್ಯರ್ಥಿ ಸಿದ್ದು ಕೊಣ್ಣೂರ 10 ಸಾವಿರ ಮತಗಳಿಂದ ಪರಾಜಿತವಾಗಿದ್ದರೂ ಉತ್ತಮ ಹೋರಾಟ ನೀಡಿದ್ದಾರೆ. ಇನ್ನು ಮೇಲುಕೋಟೆ ಕ್ಷೇತ್ರದಲ್ಲಿ ರೈತ ಸಂಘಕ್ಕೆ ಬೆಂಬಲ ಹಿನ್ನೆಲೆಯಲ್ಲಿ ರೈತ ನಾಯಕರುಗಳು ಗೆದ್ದಿದ್ದಾರೆ.
ಕೃಷಿ ಪ್ರಧಾನ ರಾಜ್ಯದಲ್ಲಿ ರೈತ ಪರ ಹೋರಾಟ ನಡೆಸಿ ಪಕ್ಷವನ್ನು ಸಂಘಟಿಸಿ ಕಿಸಾನ್ ಕಾಂಗ್ರೆಸ್ನಲ್ಲಿ ಗೆದ್ದ ಶಾಸಕರುಗಳಿಗೆ ಮಂತ್ರಿ ಸ್ಥಾನ ನೀಡುವಂತೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಇದೇ ಸಂದರ್ಭ ಸುರ್ಜೆವಾಲ ಅವರನ್ನು ಒತ್ತಾಯಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೇಂದ್ರೀಕೃತವಾಗಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ.