ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ, ದೈಹಿಕ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನೆಲೆ ದೈಹಿಕ ವ್ಯಾಯಾಮ ಮತ್ತು ಕ್ರೀಡೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಆರೋಗ್ಯ ಭಾಗ್ಯ ದೊರೆಯುತ್ತದೆ. ಇದನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಬ್ಯಾಟರಾನಯನಪುರದ ಸಹಕಾರ ನಗರದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಒಳಾಂಗಣ ಕ್ರೀಡಾಂಗಣ ಹಾಗೂ 'ನಮ್ಮ ಕ್ರೀಡಾ ಹಬ್ಬ' ಉದ್ಘಾಟನೆ ಮಾಡಿ ಮಾತನಾಡಿದ ಅವರು, ದೇಹವನ್ನು ದಂಡಿಸುವ ಮೂಲಕ, ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಬೆವರಿನ ಜತೆ ನಮ್ಮ ಒತ್ತಡ ಕೂಡ ಹೊರಟು ಹೋಗುತ್ತದೆ. ಎಲ್ಲರೂ ಹೆಚ್ಚು ಆರೋಗ್ಯ ಪೂರ್ಣವಾಗಿ ಇರಲಿ ಎಂಬ ಉದ್ದೇಶದಿಂದ ಈ ಬೃಹತ್ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಕ್ಕಳು ಈಗ ವೀಡಿಯೋ, ಮೊಬೈಲ್ ಗೇಮ್‌ಗಳಲ್ಲಿ ಹೆಚ್ಚು ಮುಳುಗಿರುತ್ತಾರೆ. ಈ ಗೀಳನ್ನು ತಪ್ಪಿಸಿ ಮಕ್ಕಳನ್ನು ದೈಹಿಕವಾಗಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು, ಅತಿ ಕಡಿಮೆ ಶುಲ್ಕದಲ್ಲಿ ವಿವಿಧ ಕ್ರೀಡೆಯಲ್ಲಿ ಹಾಗೂ ದೈಹಿಕ ವ್ಯಾಯಾಮ ಮಾಡಲು ಅನುಕೂಲವಾಗಲೆಂದು ಈ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ನಾಡಿನೆಲ್ಲೆಡೆ ದಸರಾ ಹಬ್ಬ ನಡೆಯುತ್ತಿದೆ. ದಸರಾ ಎಂದರೆ ಹಿಂದಿನಂದಲೂ ಸಂಭ್ರಮ ಹೆಚ್ಚಾಗಿಯೇ ಇರುತ್ತದೆ. ದಸರಾ ಸಂದರ್ಭದಲ್ಲಿ ಮೊದಲಿನಿಂದಲೂ ಕ್ರೀಡೆ ಕೂಡ ನಡೆಯುತ್ತಿತ್ತು. ಇದರಂತೆ ನಾವು ಕೂಡ ಈ ನಾಡಹಬ್ಬ ಸಂದರ್ಭದಲ್ಲಿ ಈ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ 'ನಮ್ಮ ಕ್ರೀಡಾ ಹಬ್ಬ'ʼ ಆಯೋಜಿಸಿದ್ದೇವೆ ಎಂದು ತಿಳಿಸಿದರು.