ಬೆಂಗಳೂರು: ಕೋಲಾರದ ಹಾಲಿ ಕಾಂಗ್ರೆಸ್ ಶಾಸಕ ಹಾಗೂ ಮುಳಬಾಗಿಲ ಮೀಸಲು ಕ್ಷೇತ್ರದ ಮಾಜಿ ಶಾಸಕ ಜಿ. ಮಂಜುನಾಥ್ (ಕೊತ್ತೂರು ಮಂಜುನಾಥ್) ಅವರಿಗೆ ಜಾತಿ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲಾಧಿಕಾರಿಗಳ ನೇತೃತ್ವದ ಜಾತಿ ಪರಿಶೀಲನಾ ಸಮಿತಿಯ ನಿರ್ಣಯ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಇದರಿಂದಾಗಿ ಶಾಸಕ ಮಂಜುನಾಥ್ ಅವರಿಗೆ ಜಾತಿ ಪ್ರಮಾಣಪತ್ರ ವಿಚಾರದಲ್ಲಿ ಮತ್ತೆ ಹಿನ್ನಡೆ ಆದಂತಾಗಿದೆ.
ಜಿಲ್ಲಾಧಿಕಾರಿಗಳ ನೇತೃತ್ವದ ಜಾತಿ ಪರಿಶೀಲನಾ ಸಮಿತಿ ನಿರ್ಣಯ ಪ್ರಶ್ನಿಸಿ ಜಿ. ಮಂಜುನಾಥ್ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿ ಕಾಯ್ದರಿಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಬುಧವಾರ ತೀರ್ಪು ಪ್ರಕಟಿಸಿತು. ಆದರೆ, ಹೈಕೋರ್ಟ್‌ನ ಈ ಆದೇಶದಿಂದ ಅವರ ಹಾಲಿ ಶಾಸಕ ಸ್ಥಾನಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. 2013ರಲ್ಲಿ ಮುಳಬಾಗಿಲು ಮೀಸಲು ಕ್ಷೇತ್ರದಿಂದ ವಿಜಯಿಯಾದ ಸಂದರ್ಭದಲ್ಲಿ ಪಡೆದುಕೊಂಡಿದ್ದ ಸೌಲಭ್ಯಗಳನ್ನು ಪೂರ್ವಾಯನ್ವಯವಾಗುವಂತೆ ಅವರಿಂದ ವಾಪಸ್ ಪಡೆದುಕೊಳ್ಳಬಹುದಾಗಿದೆ. ಒಂದೊಮ್ಮೆ ಇದೇ ವಿಚಾರವಾಗಿ ಅವರ ವಿರುದ್ಧ ಹೈಕೋರ್ಟ್‌ನಲ್ಲಿ ಬಾಕಿ ಇರುವ ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೊಳಪಟ್ಟರೆ 6 ವರ್ಷಗಳ ಕಾಲ ಚುನಾವಣಾ ಸ್ಪರ್ಧೆಗೆ ನಿರ್ಬಂಧ ಸೇರದಂತೆ ಕೆಲವು ಕಾನೂನು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಪ್ರಕರಣದ ಹಿನ್ನೆಲೆ ಏನು?ಜಿ. ಮಂಜುನಾಥ್ 2013ರಲ್ಲಿ ಮುಳಬಾಗಿಲು ಮೀಸಲು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಜೆಡಿಎಸ್ ಪರಾಜಿತ ಅಭ್ಯರ್ಥಿ ಮುನಿನಂಜಪ್ಪ ಜಾತಿ ಪ್ರಮಾಣದ ಸಿಂಧುತ್ವವನ್ನು ಪ್ರಶ್ನಿಸಿದ್ದರು. ಈ ಪ್ರಕರಣ ತಹಶೀಲ್ದಾರ್, ಜಿಲ್ಲಾಧಿಕಾರಿ, ಸಿವಿಲ್ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ವಿಚಾರಣೆಗೊಳಪಟ್ಟಿತ್ತು. ಅಂತಿಮವಾಗಿ ಹೈಕೋರ್ಟ್ ಮಂಜುನಾಥ್ ಅರ್ಜಿಯನ್ನು ವಜಾಗೊಳಿಸಿತ್ತು.
ಇದರ ವಿರುದ್ಧ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್ ಅರ್ಜಿ ವಜಾಗೊಳಿಸಿ, ಜಾತಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿತ್ತು. ಅಲ್ಲದೇ, ಜಾತಿ ಪರಿಶೀಲನಾ ಸಮಿತಿಯ ನಿರ್ಣಯದ ಬಗ್ಗೆ ಆಕ್ಷೇಪವಿದ್ದರೆ ಪುನಃ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು ಎಂದೂ ಸುಪ್ರೀಂಕೋರ್ಟ್ ಹೇಳಿತ್ತು. ಅದರಂತೆ ಜಾತಿ ಪರಿಶೀಲನಾ ಸಮಿತಿಯ ನಿರ್ಣಯವನ್ನು ಮಂಜುನಾಥ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಸಂಬಂಧ ಜಿ. ಮಂಜುನಾಥ್ ಅವರು ಪರಿಶಿಷ್ಟ ಜಾತಿಯಲ್ಲಿರುವ ಬುಡಗ ಜಂಗಮ ಜಾತಿಗೆ ಸೇರಿಲ್ಲ. ಆದರೆ, ಪ್ರವರ್ಗ 1ಕ್ಕೆ ಸೇರಿರುವ ಬೈರಾಗಿ ಜಾತಿ ಸೇರಿದವರು ಎಂದು ಜಿಲ್ಲಾಧಿಕಾರಿಗಳ ನೇತೃತ್ವದ ಜಾತಿ ಪರಿಶೀಲನಾ ಸಮಿತಿ ನಿರ್ಣಯ ಕೈಗೊಂಡಿತ್ತು. ಇದನ್ನು ಮಂಜುನಾಥ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದೀಗ ಹೈಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿದೆ.
ಇದನ್ನೂ ಓದಿ:ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕರಣದಲ್ಲಿ ರಾಹುಲ್ ಗಾಂಧಿ ವಿಚಾರಣೆ ಪ್ರಶ್ನಿಸಿ ಪ್ರತಿಭಟನೆ: ಖಾದರ್ ವಿರುದ್ಧದ ಪ್ರಕರಣ ರದ್ದು