ಬೆಂಗಳೂರು:ಮಗ ಮಾಡಿದ ಅಪಘಾತದ ಕುರಿತು ಮಾಧ್ಯಮಗಳಿಗೆ ಉತ್ತರಿಸಲಾಗದೆ, ಮುಜುಗರದಿಂದ ಶಾಸಕ ಹ್ಯಾರಿಸ್ ಹೊರಟುಹೋದ ಘಟನೆ ಇಂದು ನಡೆಯಿತು.
ನಲ್ಪಾಡ್ ಮಾಡಿದ್ದ ಅಪಘಾತದ ಕುರಿತು ಪ್ರತಿಕಿಯಿಸಲಾಗದೆ ನಿರ್ಗಮಿಸಿದ ಶಾಸಕ ಹ್ಯಾರಿಸ್ - ಪುತ್ರ ನಲ್ಪಾಡ್ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ
ಕೆಪಿಸಿಸಿ ಕಚೇರಿಗೆ ಆಗಮಿಸಿದ್ದ ಶಾಸಕ ಎನ್ಎ ಹ್ಯಾರಿಸ್, ಪುತ್ರ ನಲ್ಪಾಡ್ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ತೆರಳಿದರು.
ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವ ವಿಚಾರದಲ್ಲಿ, ಸಮರ್ಥ ವಾದ ಮಂಡಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಈ ಸಂಬಂಧ ಪ್ರತಿಭಟನೆ ನಡೆಸಲು ಮಹತ್ವದ ಸಭೆ ಕೆರಯಲಾಗಿತ್ತು. ಇದರಲ್ಲಿ ಪಾಲ್ಗೊಂಡಿದ್ದ ಶಾಂತಿನಗರ ಶಾಸಕ ಎನ್ಎ ಹ್ಯಾರಿಸ್ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡದೆ ತೆರಳಿದರು.
ಎರಡು ದಿನದ ಹಿಂದೆ ದುಬಾರಿ ಕಾರೊಂದನ್ನು ಅಜಾಗರೂಕತೆಯಿಂದ ಓಡಿಸಿ ದ್ವಿಚಕ್ರ ವಾಹನ ಹಾಗೂ ಆಟೋಗೆ ಡಿಕ್ಕಿ ಹೊಡೆದು, ಪೊಲೀಸರ ಕೈಗೆ ಸಿಗದೆ ನಲ್ಪಾಡ್ ಓಡಾಡುತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಮಾಧ್ಯಮಗಳು ಪ್ರಶ್ನೆ ಕೇಳುತ್ತವೆ ಎನ್ನುವುದನ್ನು ಮೊದಲೇ ಊಹಿಸಿದ್ದ ಶಾಸಕ ಹ್ಯಾರಿಸ್, ಕಚೇರಿಗೆ ಆಗಮಿಸಿದ ಸಂದರ್ಭ ಹಾಗೂ ನಿರ್ಗಮಿಸುವ ಸಂದರ್ಭ ಮಾಧ್ಯಮಗಳತ್ತ ನೋಡದೆ ತರಾತುರಿಯಲ್ಲಿ ತೆರಳುವ ಪ್ರಯತ್ನ ಮಾಡಿದರು. ತೆರಳುವ ಸಂದರ್ಭ ಮಾಧ್ಯಮಗಳು ತೀವ್ರ ಒತ್ತಡ ಹೇರಿದ ಹಿನ್ನೆಲೆ ಪ್ರತಿಕ್ರಿಯೆ ನೀಡದೆ ಸೆಲ್ಯೂಟ್ ಮಾಡಿ ತೆರಳಿದರು. ಪುತ್ರನ ಪರ ಅಥವಾ ವಿರುದ್ಧವಾಗಿ ಮಾತನಾಡಲಾಗದ ಹ್ಯಾರಿಸ್ ಇಕ್ಕಟ್ಟಿಗೆ ಸಿಲುಕಬಾರದು ಎಂಬ ಉದ್ದೇಶದಿಂದ ಮೌನವಾಗಿ ತೆರಳಿದ್ದಾರೆ.