ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗಕ್ಕೆ ಮಲತಾಯಿ ಧೋರಣೆ ಆಗುತ್ತಿದ್ದು, ಈ ಸಂಬಂಧ ನಾಳೆ ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಲಿದ್ದೇವೆ ಎಂದು ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಹೇಳಿದರು.
ವಿಧಾನಸೌಧದಲ್ಲಿ ಕಾಂಗ್ರೆಸ್ ಕಲ್ಯಾಣ ಕರ್ನಾಟಕ ಭಾಗದ ಶಾಸಕರ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಬೇಕಿತ್ತು. ಕಲ್ಯಾಣ ಕರ್ನಾಟಕ ಮಂಡಳಿ ಮಾಡುತ್ತೀವೆ ಎಂದು ಸಿಎಂ ಭರವಸೆ ಕೊಟ್ಟಿದ್ದರೂ ಆದರೆ ಈಡೇರಿಲ್ಲ. ಅನುದಾನ ನೀಡಿದರೂ ಕೂಡ ಅದು ಬಳಕೆಯಾಗುತ್ತಿಲ್ಲ. ಸುಮಾರು 1,130 ಕೋಟಿಗೆ ಅನುದಾನ ಇಳಿಕೆ ಮಾಡಿದ್ದಾರೆ. ಕೋವಿಡ್ ಕಾರಣದಿಂದ ಶೇ.20 ಮಾತ್ರ ಅನುದಾನ ಬಳಕೆ ಮಾಡ್ತಿದ್ದಾರೆ. ಕಳೆದ ಬಜೆಟ್ನಲ್ಲಿ ಘೋಷಣೆ ಮಾಡಿದ ಅನುದಾನಕ್ಕೆ ಫೆಬ್ರವರಿ ಬಂದರೂ ಕ್ರಿಯಾ ಯೋಜನೆ ಮಾಡಿಲ್ಲ ಎಂದು ಕಿಡಿಕಾರಿದರು.
ಇಲ್ಲಿಯವರೆಗೆ ಬರಿ 250 ಕೋಟಿ ಹಣ ಖರ್ಚು ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದವರನ್ನು ಎರಡನೇ ದರ್ಜೆಯ ನಾಗರಿಕರಂತೆ ನೋಡಲಾಗುತ್ತಿದೆ. ಈ ಭಾಗಕ್ಕೆ ಯುಪಿಎ ಸರ್ಕಾರ ಇದ್ದಾಗ 371ಜೆ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಇದ್ದಾಗ 2013-18ರವರಗೆ 600 ರಿಂದ 1200 ಕೋಟಿ ಅನುದಾನ ನೀಡಲಾಗಿತ್ತು. 30 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಲಾಗಿತ್ತು. ಆದರೆ ಈಗ ನೇಮಕಾತಿಯಲ್ಲೂ ತಾರತಮ್ಯ ಮಾಡಲಾಗುತ್ತಿದೆ. ಈ ಬಗ್ಗೆ ಸಿಎಂ ಭೇಟಿಯಾಗಿ ಮನವಿ ಮಾಡಲಿದ್ದೇವೆ ಎಂದು ಖಂಡ್ರೆ ಹೇಳಿದ್ರು.