ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ವಿದ್ಯುತ್ ಇಲಾಖೆಯಲ್ಲಿ 15 ಸಾವಿರ ಕೋಟಿ ರೂ. ನಷ್ಟ: ಖಂಡ್ರೆ ಆರೋಪ - ರಾಜ್ಯದಲ್ಲಿ ಸೌರ ವಿದ್ಯುತ್ ಪಾರ್ಕ್ ಮತ್ತು ಘಟಕಗಳ ಸ್ಥಾಪನೆ

ಕಳೆದ ಒಂದೂವರೆ ವರ್ಷದಿಂದ ವಿದ್ಯುತ್ ಇಲಾಖೆಯಲ್ಲಿ ರಾಜ್ಯದ ಬೊಕ್ಕಸಕ್ಕೆ 15 ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿದ್ದು, ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ 4 ವರ್ಷದಲ್ಲಿ 44 ಸಾವಿರ ಕೋಟಿ ರೂ. ನಷ್ಟದ ಹೊರೆಯನ್ನು ರಾಜ್ಯದ ಜನತೆ ಹೊರಬೇಕಾಗುತ್ತದೆ ಎಂದು ಈಶ್ವರ್​ ಖಂಡ್ರೆ ಹೇಳಿದರು.

mla-eshwar-khandre-talk-
ಖಂಡ್ರೆ ಆರೋಪ

By

Published : Nov 21, 2020, 4:10 PM IST

ಬೆಂಗಳೂರು: ರಾಜ್ಯ ಇಂಧನ ಇಲಾಖೆ ಉನ್ನತಾಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ರಾಜ್ಯದ ಬೊಕ್ಕಸಕ್ಕೆ ಈಗಾಗಲೇ 15 ಸಾವಿರ ಕೋಟಿ ರೂ. ನಷ್ಟವಾಗಿದ್ದು, ಸರ್ಕಾರ ಈ ನಷ್ಟದ ಹೊರೆಯನ್ನು ವಿದ್ಯುತ್ ದರ ಹೆಚ್ಚಿಸಿ ಗ್ರಾಹಕರ ಮೇಲೆ ಹಾಕಿರುವುದು ಅಕ್ಷಮ್ಯ ಮತ್ತು ಅಮಾನವೀಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕಿಡಿಕಾರಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​ ಖಂಡ್ರೆ

ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಸೌರ ವಿದ್ಯುತ್ ಪಾರ್ಕ್ ಮತ್ತು ಘಟಕಗಳ ಸ್ಥಾಪನೆ, ಇತರ ಮೂಲಗಳ ಹೆಚ್ಚುವರಿ ಸಾಮರ್ಥ್ಯದಿಂದಾಗಿ ಪ್ರಸ್ತುತ ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಲಭ್ಯವಿದೆ. ಕೇಂದ್ರದಿಂದ ಮತ್ತು ಇತರ ರಾಜ್ಯಗಳಿಂದ ಹೆಚ್ಚುವರಿ ವಿದ್ಯುತ್ ಖರೀದಿ ಮಾಡುವ ಅಗತ್ಯ ಇಲ್ಲ. ಜೊತೆಗೆ ಈಗಾಗಲೇ ಮಾಡಿಕೊಂಡಿರುವ ದೀರ್ಘಾವಧಿ ವಿದ್ಯುತ್ ಖರೀದಿಗೆ ಒಪ್ಪಂದ ರದ್ದುಪಡಿಸುವ ಅವಕಾಶವಿದ್ದರೂ ಇಂಧನ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ.

ಕಾರಣ ಕಳೆದ ಒಂದೂವರೆ ವರ್ಷದಿಂದ ರಾಜ್ಯದ ಬೊಕ್ಕಸಕ್ಕೆ 15 ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿದ್ದು, ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ 4 ವರ್ಷದಲ್ಲಿ 44 ಸಾವಿರ ಕೋಟಿ ರೂ. ನಷ್ಟದ ಹೊರೆಯನ್ನು ರಾಜ್ಯದ ಜನತೆ ಹೊರಬೇಕಾಗುತ್ತದೆ ಎಂದರು.

ನಮ್ಮ ರಾಜ್ಯದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆ ತಗ್ಗಿಸಿ ಅಥವಾ ನಿಲ್ಲಿಸಿ ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವ ಸರ್ಕಾರ, ಕೇಂದ್ರದಿಂದ ಮತ್ತು ಅನ್ಯ ರಾಜ್ಯಗಳಿಂದ ವಿದ್ಯುತ್ ಖರೀದಿಸುತ್ತಿರುವುದರ ಹಿಂದಿನ ಉದ್ದೇಶ ಏನು?. ಇಂಧನ ಇಲಾಖೆ ಸೂಕ್ತ ಲೆಕ್ಕಾಚಾರ ಇಲ್ಲದೆ ವಿದ್ಯುತ್ ಖರೀದಿಸುತ್ತಿರುವುದರಿಂದ ಮತ್ತು ಸೂಕ್ತ ಕಾಲದಲ್ಲಿ ಒಪ್ಪಂದ ರದ್ದು ಮಾಡದೆ ಇರುವುದರಿಂದಾಗಿ 15 ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಈ ಕುರಿತಂತೆ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರೇ ಸರ್ಕಾರಕ್ಕೆ ಅ. 14 ಮತ್ತು 15ರಂದು 40 ಪುಟಗಳ ಸವಿರವಾದ ಪತ್ರ ಬರೆದಿದ್ದಾರೆ ಎಂದು ಆರ್​​ಟಿಐ ಅಡಿ ಪಡೆಯಲಾಗಿರುವ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಕೇಂದ್ರೀಯ ಉತ್ಪಾದನಾ ಕೇಂದ್ರಗಳಿಂದ (ಸಿಜಿಎಸ್) ರಾಜ್ಯದ ಎಲ್ಲಾ ಎಸ್ಕಾಂಗಳು 5114 ಮೆಗಾ ವ್ಯಾಟ್ ವಿದ್ಯುತ್​ಅನ್ನು ದೀರ್ಘಾವಧಿಗೆ ಪಡೆದುಕೊಂಡಿವೆ. ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಪಿಜಿಸಿಐಎಲ್)ನಿಂದ ಕೂಡ ಅಷ್ಟೇ ಬೃಹತ್ ಪ್ರಮಾಣದ ದೀರ್ಘಾವಧಿಯ ಮುಕ್ತ ಪ್ರವೇಶವನ್ನು ಪಡೆದುಕೊಳ್ಳಲಾಗಿದೆ. 2019-20ರ ಅವಧಿಯಲ್ಲಿ ಎಸ್ಕಾಂಗಳು ಸಿಜಿಎಸ್​​ಗೆ ಸ್ಥಿರ ಶುಲ್ಕವಾಗಿ 4,388 ಕೋಟಿ ರೂ. ಮತ್ತು ಪ್ರಸರಣ ಶುಲ್ಕವಾಗಿ ಪಿಜಿಸಿಐಎಲ್​ಗೆ 3037 ಕೋಟಿ ರೂ. ಪಾವತಿಸಿವೆ. ಈ ಮೊತ್ತ 7,425 ಕೋಟಿ ರೂ. ಆಗುತ್ತದೆ. ಪ್ರಸ್ತುತ ರಾಜ್ಯದಲ್ಲಿ 55,387 ದಶಲಕ್ಷ ಯುನಿಟ್ ಹೆಚ್ಚುವರಿ ಬಳಕೆಯಾಗದ ಸಾಮರ್ಥ್ಯವನ್ನು ಹೊಂದಿದೆ.

ಆದಾಗ್ಯೂ (ಎನ್ಸಿಇ ಮತ್ತು ಕೆಪಿಸಿಎಲ್ ಸೇರಿದಂತೆ) ಇದಕ್ಕಾಗಿ 11,069 ಕೋಟಿ ರೂ. ಪಾವತಿಸಲಾಗಿದೆ. 9,284 ಕೋಟಿ ರೂ.ಗಳನ್ನು ಸಾಮರ್ಥ್ಯದ ಬಳಕೆ ಮಾಡಿಕೊಳ್ಳದಿರುವುದಕ್ಕಾಗಿ ವೆಚ್ಚ ಮಾಡಲಾಗಿದೆ. ಉಳಿದ 1,785 ಕೋಟಿ ರೂ.ಗಳನ್ನು ಪಿಜಿಸಿಐಎಲ್​​ನೊಂದಿಗೆ ಸಂಪರ್ಕಿತವಾದ ವಿದ್ಯುತ್ ಪ್ರಸರಣ ಕಾರಿಡಾರ್ ಬಳಕೆ ಮಾಡಿಕೊಳ್ಳದಿರುವುದಕ್ಕೆ ವೆಚ್ಚ ಮಾಡಲಾಗಿದೆ. ಇದನ್ನು ಸರ್ಕಾರ ರದ್ದು ಮಾಡಬೇಕು. ಇಲ್ಲದಿದ್ದರೆ ರಾಜ್ಯ ತಾನು ಪಡೆಯದ ವಿದ್ಯುತ್​ಗೆ ಹಣ ಪಾವತಿ ಮಾಡುವುದರಿಂದ ಅದರ ಹೊರೆ ಬೆಲೆ ಏರಿಕೆಯ ರೂಪದಲ್ಲಿ ರಾಜ್ಯದ ಜನತೆಗೆ ಆಗುತ್ತಿರುತ್ತದೆ ಎಂದರು.

ಪ್ರಸ್ತುತ ರಾಜ್ಯದಲ್ಲಿರುವ ಹೆಚ್ಚುವರಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಮುಂದಿನ 4-5 ವರ್ಷಗಳಲ್ಲಿ ಬೇಡಿಕೆ ಹೆಚ್ಚಿದಾಗ ಬಳಸಿಕೊಳ್ಳಬಹುದಾಗಿದೆ. ಅಲ್ಲಿಯವರೆಗೆ ಹೆಚ್ಚುವರಿ ವಿದ್ಯುತ್ ಸಾಮರ್ಥ್ಯದ ನಿರ್ವಹಣೆ ಮಾಡದಿದ್ದರೆ ಮುಂದಿನ 4-5 ವರ್ಷಗಳವರೆಗೆ ಅಂದರೆ ಬೇಡಿಕೆ ಮತ್ತು ಹೆಚ್ಚುವರಿ ವಿದ್ಯುತ್ ಪ್ರಮಾಣ ಸರಿದೂಗುವ ತನಕ ರಾಜ್ಯ ಸರ್ಕಾರ ಮತ್ತು ಎಸ್ಕಾಂಗಳು ನಿಷ್ಟ್ರಯೋಜಕವಾಗಿ ವರ್ಷಕ್ಕೆ 11 ಸಾವಿರ ಮತ್ತು ನಾಲ್ಕು ವರ್ಷಕ್ಕೆ 44 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ ಎಂದು ಪಿಆರ್​​ಡಿಸಿಎಲ್ ವರದಿ ತಿಳಿಸಿದೆ.

ಈ ಬಗ್ಗೆ ಸರ್ಕಾರಕ್ಕೆ 2019ರ ಆಗಸ್ಟ್​​ನಲ್ಲೇ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಕಳೆದ ವರ್ಷ ರಾಜ್ಯದ ಬೊಕ್ಕಸಕ್ಕೆ 5 ಸಾವಿರ ಕೋಟಿ ರೂಪಾಯಿ ನಷ್ಟ ಉಂಟು ಮಾಡಿದೆ. ಈ ವರ್ಷ ಅಂದರೆ 2020-21ರ ಅವಧಿಯಲ್ಲಿ ಈಗಾಗಲೇ 8 ತಿಂಗಳು ಕಳೆದಿದ್ದು, 11 ಸಾವಿರ ಕೋಟಿ ರೂಪಾಯಿ ನಷ್ಟ ಸಂಭವಿಸಲಿದೆ. ಅಂದರೆ ಒಟ್ಟಾರೆ ರಾಜ್ಯಕ್ಕೆ ಕಳೆದ 15 ತಿಂಗಳಲ್ಲಿ ಆಗಿರುವ ನಷ್ಟ 15 ಸಾವಿರ ಕೋಟಿ ರೂಪಾಯಿ ಎಂದು ವಿವರಿಸಿದರು.

ವ್ಯವಸ್ಥಾಪಕ ನಿರ್ದೇಶಕರು ಪತ್ರ ಬರೆದು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ ಎಂದು ಪ್ರಶ್ನಿಸಿದ ಅವರು, ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಬಳಕೆಯಾಗದ ಸಾಮರ್ಥ್ಯವನ್ನು ವಾಪಸ್ ನೀಡುವ ಕಾರ್ಯ ಮಾಡಬೇಕು. ಕೂಡಲೇ ಈ ಕೆಲಸ ಮಾಡಿದರೂ ಈ ವರ್ಷದ ಉಳಿದ ಅವಧಿಗೆ ರಾಜ್ಯಕ್ಕೆ ಅದರಲ್ಲೂ ಇಂಧನ ಇಲಾಖೆಗೆ ಕನಿಷ್ಠ ವಾರ್ಷಿಕ 10,000 ಕೋಟಿ ರೂಪಾಯಿ ಉಳಿತಾಯ ಆಗುತ್ತದೆ. ಇದರಿಂದ ರಾಜ್ಯದ ಜನತೆಯ ಮೇಲೆ ಬೀಳುತ್ತಿರುವ ವಿದ್ಯುತ್ ದರ ಏರಿಕೆ ಹೊರೆ ಇಳಿಸಬಹುದು. ಕೂಡಲೇ ಈ ಅವ್ಯವಹಾರದ ನ್ಯಾಯಾಂಗ ತನಿಖೆ ಆಗಬೇಕು. ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ಮೂಲಕ ತನಿಖೆ ನಡೆಸಿದರೆ ಉತ್ತಮ ಎಂದು ಅಭಿಪ್ರಾಯಪಟ್ಟರು.

ABOUT THE AUTHOR

...view details