ಬೆಂಗಳೂರು:ರಾಜ್ಯದಲ್ಲಿ ಹಾಲಿ ಮುಖ್ಯಮಂತ್ರಿ ಜೈಲಿಗೆ ಹೋದ ಉದಾಹರಣೆ ಇದೆ. ಈ ರೀತಿ ಆಗಬಾರದು ಎಂಬುವುದು ನಮ್ಮ ಆಶಯ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾರ್ಮಿಕವಾಗಿ ನುಡಿದಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಕ್ಷ ಭ್ರಷ್ಟಾಚಾರ ಸಹಿಸುವುದಿಲ್ಲ ಎಂಬ ಆತ್ಮವಿಶ್ವಾಸ ಇದೆ. ಅದು ಫಲ ಕೊಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದುಷ್ಟರ ಸಂಹಾರ ಆಗಬೇಕು. ದೇಶಕ್ಕೆ, ರಾಜ್ಯಕ್ಕೆ, ಪಕ್ಷಕ್ಕೆ ಒಳ್ಳೆಯದಾಗಬೇಕು. ರಾಮಾಯಣದಲ್ಲಿ ರಾವಣನ ಸಂಹಾರ ಆಗಬೇಕಾದ್ರೆ ಕಾಲ ಕೂಡಿ ಬರಬೇಕಾಯ್ತು. ಹಾಗೇ ಕೌರವರ ಸಂಹಾರಕ್ಕೂ ಒಂದು ಕಾಲ ಕೂಡಿ ಬಂತು. ಆದಿಲ್ ಶಾಹಿ, ಟಿಪ್ಪು ಸಂತತಿ ಮುಂದೇನಾಯ್ತು?. ಎಲ್ಲದಕ್ಕೂ ಒಂದು ಸಮಯ ಬರುತ್ತದೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ:
ನಾಯಕತ್ವ ಬದಲಾವಣೆ ಇಲ್ಲ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ನಾನು ಮುಖ್ಯಮಂತ್ರಿ ಮಗ ಆಗಿದ್ರೆ ನಾನು ಹಾಗೆ ಹೇಳ್ತಿದ್ದೆ, ರಾಜಕಾರಣದಲ್ಲಿ ಏನೆಲ್ಲಾ ನಡೆಯಲ್ಲ. ರಾಜಕಾರಣದಲ್ಲಿ ಎಲ್ಲವೂ ನಡೆಯುತ್ತದೆ, ಅವರ ಮಗ ಆಗಿರೋದ್ರಿಂದ ಅವರು ಹೇಳ್ತಾರೆ. ಏನೇನೋ ಮಾಡ್ತಾರೆ, ಅದರ ಪರಿಣಾಮ ಮುಂದೆ ಆಗಲಿದೆ ಎಂದರು. ದುಷ್ಟರಿಗೆ ಒಂದು ಕಾಲ ಇದ್ದೇ ಇರುತ್ತದೆ. ಕ್ಷಮಾಪಣೆ ಇರುತ್ತದೆ. ಆದರೆ, ಪದೇ ಪದೆ ತಪ್ಪು ಮಾಡಬಾರದು ಎಂದು ಬಿಎಸ್ ವೈ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.
ಅರುಣ್ ಸಿಂಗ್ ರಾಜ್ಯಕ್ಕೆ ಬಂದಿದ್ದು ಪ್ರಧಾನಮಂತ್ರಿ ಬಂದಂಗೆ ಆಯ್ತು:
ಇನ್ನು ಅರುಣ್ ಸಿಂಗ್ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅರುಣ್ ಸಿಂಗ್ ಭೇಟಿ ರಿಸಲ್ಟ್ ಏನು ಎಂಬುದು ಗೊತ್ತಿತ್ತು. ವಿಮಾನ ನಿಲ್ದಾಣದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದಿದ್ದರು, ಹೋಗುವಾಗಲೂ ಸೂರ್ಯ ಚಂದ್ರನಂತೆ ನಾಯಕತ್ವ ಬದಲಾವಣೆ ಇಲ್ಲ ಎಂದಿದ್ದಾರೆ. ಅರುಣ್ ಸಿಂಗ್ ರಾಜ್ಯಕ್ಕೆ ಬಂದಿದ್ದು ಪ್ರಧಾನ ಮಂತ್ರಿ ಬಂದಂಗೆ ಆಯಿತು.
ಯಾರು ಖುರ್ಚಿ ಉಳಿಸಿಕೊಳ್ಳಬೇಕೋ ಅವರು ಅರೆಂಜ್ ಮೆಂಟ್ ಮಾಡ್ತಾರೆ. ಕೆಲವರು ಯಡಿಯೂರಪ್ಪ ಅವರೇ ನಮ್ಮ ನಾಯಕ ಅಂತ ಹೊರಗಡೆ ಹೇಳ್ತಾರೆ. ಒಳಗಡೆ ಹೋಗಿ ಯಾವಾಗ ಬೇಕಾದರೂ ಸಿಎಂನ ಚೇಂಜ್ ಮಾಡಿ ಅಂತಾರೆ. ಬೇಗ ಚೇಂಜ್ ಮಾಡಿ ಅಂತ ಒಳಗೋಗಿ ಹೇಳ್ತಾರೆ, ಹೊರಗೆ ಬಂದು ಜೈಕಾರ ಹಾಕ್ತಾರೆ. ಆ ತರಹದ ಮನುಷ್ಯ ನಾನಲ್ಲ ಎಂದು ಸ್ವಪಕ್ಷಿಯ ಕೆಲವು ಸಚಿವರು, ಶಾಸಕರ ವಿರುದ್ಧ ಕಿಡಿಕಾರಿದರು.