ಕರ್ನಾಟಕ

karnataka

ETV Bharat / state

ನೋಟಿಸ್​ಗೆ ನಾ ಹೆದರಲ್ಲ, ನೀವು ಕುರ್ಚಿ ಬಿಡಬೇಕಾದೀತು: ಯತ್ನಾಳ್ ಗುಡುಗು

ನಮ್ಮ ಸರ್ಕಾರ ಇದೆ, ನಾನು ಸರ್ಕಾರದ ಶಾಸಕ. ನನಗೆ ನೋಟಿಸ್ ಕೊಟ್ಟರೆ ನನ್ನ ಬಾಯಿ ಬಂದ್ ಆಗುವುದಿಲ್ಲ. ಯತ್ನಾಳ್​ನನ್ನು ಅಂಜಿಸುತ್ತೇವೆ ಎಂದರೆ ಆದಷ್ಟು ಬೇಗ ಕುರ್ಚಿ ಖಾಲಿ ಮಾಡಬೇಕಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

MLA Basanagouda Yatnal slams CM BS yeddyurappa
ಸಿಎಂ ವಿರುದ್ಧ ಮತ್ತೆ ಗುಡುಗಿದ ಯತ್ನಾಳ್

By

Published : Feb 21, 2021, 2:23 PM IST

ಬೆಂಗಳೂರು: ನನಗೆ ನೋಟಿಸ್ ಕೊಟ್ಟರೆ ನನ್ನ ಬಾಯಿ ಬಂದ್ ಆಗುವುದಿಲ್ಲ. ನೋಟಿಸ್ ಕೊಟ್ಟು ಯತ್ನಾಳ್​ನನ್ನು ಅಂಜಿಸುತ್ತೇವೆ ಎಂದರೆ ಆದಷ್ಟು ಬೇಗ ಕುರ್ಚಿ ಖಾಲಿ ಮಾಡಬೇಕಾಗಲಿದೆ ಎಂದು ಮತ್ತೊಮ್ಮೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದರು.

ನಗರದ ಅರಮನೆ ಮೈದಾನದಲ್ಲಿ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವಂತೆ ಒತ್ತಾಯಿಸಿ ನಡೆದ ಸಮಾವೇಶವನ್ನು ಖಡ್ಗ ಝಳಪಿಸುವ ಮೂಲಕ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ನಮ್ಮ ಸರ್ಕಾರ ಇದೆ, ನಾನು ಸರ್ಕಾರದ ಶಾಸಕ. ನನಗೆ ನೋಟಿಸ್ ಕೊಟ್ಟರೆ ನನ್ನ ಬಾಯಿ ಬಂದ್ ಆಗುವುದಿಲ್ಲ. ಯತ್ನಾಳ್​ನನ್ನು ಅಂಜಿಸುತ್ತೇವೆ ಎಂದರೆ ಆದಷ್ಟು ಬೇಗ ಕುರ್ಚಿ ಖಾಲಿ ಮಾಡಬೇಕಾಗಲಿದೆ ಎಂದರು.

ಇದನ್ನೂ ಓದಿ:ಪಂಚಮಸಾಲಿ ಸಮುದಾಯ 2ಎ ಗೆ ಸೇರಿಸುವ ಬೇಡಿಕೆ ಈಡೇರದೆ ಮಠಕ್ಕೆ ಮರಳಲ್ಲ: ಕೂಡಲಸಂಗಮ‌ ಶ್ರೀ

ಒಬಿಸಿ ಪಟ್ಟಿಗೆ ಸೇರಿಸಬೇಕಾದಲ್ಲಿ ದೆಹಲಿಗೆ ಹೋಗುತ್ತೇನೆ: ಸದನದಲ್ಲಿ ದನಿ ಎತ್ತಿದರೆ ನನಗೆ 25 ಸಂಸದರನ್ನು ಕರೆದುಕೊಂಡು ದೆಹಲಿಗೆ ಹೋಗಿ ಅಂತಾರೆ. ನಾನೇಕೆ ಹೋಗಲಿ, ನಿಮ್ಮ ಕಡೆ ಚಾವಿ ಇಟ್ಟುಕೊಂಡು ಮತ್ತೊಬ್ಬರ ಕಡೆ ಕೈ ತೋರಿಸಿದರೆ ನಾವೇಕೆ ಹೋಗಬೇಕು. ವೀರಶೈವ ಲಿಂಗಾಯತ ಸಮುದಾಯ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕಾದಲ್ಲಿ ದೆಹಲಿಗೆ ಹೋಗುತ್ತೇನೆ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದರು.

ನಾವು ವಿಧಾನಸೌಧದ ಮೂರನೇ ಮಹಡಿಯಲ್ಲಿ ಇಲ್ಲ. ಸ್ವಲ್ಪ ದಿನದಲ್ಲಿ ಅಲ್ಲಿಗೆ ಹೋಗುತ್ತೇವೆ. ಎಲ್ಲರಿಗೂ ಒಂದು ಕಾಲ ಬರಲಿದೆ. 2ಎ ಕೊಡುತ್ತೇವೆ ಅಂತಾ ಯಾಕೆ ಹೇಳಿದ್ರಿ. ನಾಟಕ ಕಂಪನಿ ಬಂದ್ ಮಾಡಿ, ನಿಮ್ಮ ನಾಟಕ ಕಂಪನಿ ನನಗೆ ಗೊತ್ತಿದೆ. ನೋಟಿಸ್ ಕೊಟ್ಟರೆ ಅಂಜುತ್ತೇನಾ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ವರುಣ ದೇವನಿಗೆ ಪ್ರಾರ್ಥನೆ ಮಾಡಿಕೊಂಡೆ ಮಳೆ ನಿಂತಿತು: ನಾನು ಮಾತನಾಡುವಾಗ ಮಳೆ ನಿಂತಿತು. ಹನುಮಂತ, ವರುಣ ದೇವನಿಗೆ ಪ್ರಾರ್ಥನೆ ಮಾಡಿಕೊಂಡೆ ಮಳೆ ನಿಂತಿತು. ನನ್ನ ಬೇಡಿಕೆ ಸತ್ಯವಾಯಿತು. ನಾನು ಬೋಗಸ್ ರಾಜಕಾರಣಿ ಅಲ್ಲ. ಯಾರಿಗೂ ಪಂಪ್ ಹೊಡೆಯಲ್ಲ. ಮಂತ್ರಿ ಆಗಬೇಕಿಲ್ಲ, ಮಂತ್ರಿ ಅಪ್ಪ ಇದೀನಿ ಎಂದರು.

ಗೃಹ ಸಚಿವ ಬೊಮ್ಮಾಯಿ ನನ್ನ ಜೊತೆ ಮಾತನಾಡಿದ್ದಾರೆ. ಬೇರೆಯವರಿಗೆ ಕೊಟ್ಟಂತೆ ನನಗೆ ಭರವಸೆ ಕೊಡಬೇಡಿ. ಶಿಗ್ಗಾವಿಯಲ್ಲಿ 50 ಸಾವಿರ ಪಂಚಮಸಾಲಿ ಜನರಿದ್ದಾರೆ. ಭರವಸೆ ಕೊಡುವಾಗ ಎಚ್ಚರಿಕೆಯಿಂದ ಕೊಡಿ ಎಂದು ಹೇಳಿದರು.

ಇದನ್ನೂ ಓದಿ:ಮೀಸಲಾತಿ ಕುರಿತಂತೆ ಕಾನೂನು ವ್ಯಾಪ್ತಿಯಲ್ಲಿ ಸಿಎಂ ತೀರ್ಮಾನ ಮಾಡುತ್ತಾರೆ: ಸಚಿವ ಸುಧಾಕರ್

ಸಿ.ಸಿ. ಪಾಟೀಲ್​ಗೆ ಇಂಧನ, ನಿರಾಣಿಗೆ ಕಂದಾಯ ಖಾತೆ ಕೊಡಿ : ವೀರಶೈವ ಲಿಂಗಾಯತ ಎಲ್ಲಾ ಮಠಾಧೀಶರು ನಮಗೆ ಬೆಂಬಲ ಕೊಟ್ಟಿದ್ದಾರೆ. ಗುರು-ವಿರಕ್ತ ಮಠಾಧೀಶರೆಲ್ಲರೂ ಮೀಸಲಾತಿ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ. ಸಿಸಿ ಪಾಟೀಲ ಮತ್ತು ಮುರುಗೇಶ್ ನಿರಾಣಿ ಇಬ್ಬರು ಮಂತ್ರಿಗಳಿಗೆ ನಾವು ಮನವಿ ಮಾಡುತ್ತಿದ್ದೇವೆ. ನಾವು ಮಾರ್ಚ್ 4 ರಂದು ಧರಣಿ ಮಾಡುತ್ತೇವೆ. ಅಂದು ಅಧಿವೇಶನ ಕೂಡ ಆರಂಭವಾಗಲಿದೆ. ಅಲ್ಲಿ ನಾನು ಮತ್ತೆ ಎದ್ದು ನಿಲ್ಲುತ್ತೇನೆ. ಸಿಎಂ ಉತ್ತರ ಕೊಡಲೇಬೇಕು. ಇಲ್ಲದೇ ಇದ್ದಲ್ಲಿ ನೀವಿಬ್ಬರು ರಾಜೀನಾಮೆ ಕೊಡಬೇಕು. ನಿಗಮ ಮಂಡಳಿ ಅಧ್ಯಕ್ಷರು ರಾಜೀನಾಮೆ ಕೊಡಬೇಕು. ನಮ್ಮ ಸಮುದಾಯವರಿಗೆ ಸಣ್ಣ ಖಾತೆ ಕೊಟ್ಟು ಬೆಣ್ಣೆ ಸವರುತ್ತಾರೆ. ಸಿ.ಸಿ. ಪಾಟೀಲ್​ಗೆ ಇಂಧನ, ನಿರಾಣಿಗೆ ಕಂದಾಯ ಖಾತೆ ಕೊಡಿ ಎಂದು ಒತ್ತಾಯಿಸಿದರು. ಈ ಅಧಿವೇಶನ ಮುಗಿಯುವ ಒಳಗೆ ಘೋಷಣೆ ಮಾಡದೇ ಇದ್ದಲ್ಲಿ ಹೋರಾಟದ ಸ್ವರೂಪ ಬದಲಾಗಲಿದೆ ಎಂದರು.

ಯಡಿಯೂರಪ್ಪ ನೀವು ಮಾತು ಕೊಟ್ಟಂತೆ ನಡೆದುಕೊಳ್ಳಬೇಕು. ಎಲ್ಲವೂ ನಿಮ್ಮ ಕೈಯಲ್ಲಿ ಇದೆ. ಆದರೆ, ನಿಮಗೆ ಮನಸ್ಸಿಲ್ಲ. ನಿಮ್ಮ ಜಾತಿಗಾದರೆ ತಕ್ಷಣ ಕೊಟ್ಟಿರಿ. ನಮಗೆ ಯಾಕೆ ಕೊಡುತ್ತಿಲ್ಲ. ಕೇಳಿದರೆ ಪ್ರಾಣ ಕೊಡುತ್ತೇವೆ ಎನ್ನುತ್ತಾರೆ. ನಮಗೆ ಯಾರ ಪ್ರಾಣ ಬೇಕಿಲ್ಲ. 2ಎ ಕೊಡಿ ಸಾಕು. ಇಲ್ಲವೇ ಕೊಡಲು ಆಗಲ್ಲ ಎಂದು ಹೇಳಿ, ನಮಗೆ ಹೇಗೆ ತೆಗೆದುಕೊಳ್ಳಬೇಕೆಂದು ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾತನಾಡಲು ಪಟ್ಟು ಹಿಡಿದ ಜನ: ಮಾತು ಮುಗಿಸಿದರೂ ಸಮುದಾಯದ ಜನರು ಮಾತು ಮುಂದುವರೆಸುವಂತೆ ಪಟ್ಟುಹಿಡಿದಾಗ, ಈಗ ಮಾತನಾಡಿದ್ದು ಸಾಕು. ಇನ್ನು ಬಹಳ ಮಾತನಾಡಿದರೆ ಪಕ್ಷದಿಂದ ಉಚ್ಛಾಟನೆ ಮಾಡಿ ನೋಟಿಸ್ ಕೊಟ್ಟು ಕಳಿಸಲಿದ್ದಾರೆ ಎಂದು ವ್ಯಂಗ್ಯವಾಡಿದರು.

ABOUT THE AUTHOR

...view details