ಬೆಂಗಳೂರು: ಕಾಂಗ್ರೆಸ್ ಸರ್ಕಾರದ ನೂರು ದಿನದ ಸಾಧನೆ ಅಂದರೆ ಅದು ವರ್ಗಾವಣೆ ಮಾತ್ರ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಕೆಲಸ ಎಲ್ಲಾ ಸ್ಥಗಿತ ಆಗಿದೆ. ನಮ್ಮ ಅಧಿಕಾರಾವಧಿಯಲ್ಲಿನ ಕೆಲಸಗಳನ್ನೆಲ್ಲಾ ಸ್ಥಗಿತ ಮಾಡಿದ್ದಾರೆ. ಎಲ್ಲರಿಗೂ ಉಚಿತ ಖಚಿತ ಅಂದ್ರು. ಆದರೆ ಈಗ ನೂರಾರು ಷರತ್ತುಗಳನ್ನು ಹಾಕಿದ್ದಾರೆ. ಯಾವುದೇ ಯೋಜನೆ ಪೂರ್ಣ ಪ್ರಮಾಣದಲ್ಲಿ ಜನರಿಗೆ ಸಿಗುವುದಿಲ್ಲ ಎಂದರು.
ಪ್ರತಿಪಕ್ಷದ ನಾಯಕನ ಆಯ್ಕೆಗೂ ಚಾರ್ಜ್ ಶೀಟ್ಗೂ ಸಂಬಂಧ ಇಲ್ಲ. ನೂರು ದಿನದ ವೈಫಲ್ಯಗಳೇನು ಎಂದು ಚಾರ್ಜ್ ಶೀಟ್ ಬಿಡುಗಡೆ ಮಾಡಲಾಗಿದೆ. ಅದಕ್ಕೆ ಅವರು ಮೊದಲು ಉತ್ತರ ಕೊಡಬೇಕು. ವಿರೋಧ ಪಕ್ಷದ ನಾಯಕನ ಆಯ್ಕೆ ಆಗುತ್ತದೆ. ಅಧಿಕೃತ ವಿರೋಧ ಪಕ್ಷವಾಗಿ ನಾವು ಕೇಳಿದ್ದಕ್ಕೆ ಮೊದಲು ಉತ್ತರ ಕೊಡಲಿ. ಯಾವುದೋ ನೆಪ ಹೇಳಿ ಜಾರಿಕೊಳ್ಳಬಾರದು ಎಂದರು.
ಇನ್ನು, ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಕಚೇರಿ ಪಕ್ಷ ಸಂಘಟನೆಗೆ ಇರುವುದು. ಗಾಸಿಪ್ಗಳೆಲ್ಲಾ ಮನೆಗಳಲ್ಲಿ ಆಗುತ್ತದೆ. ಗಾಸಿಪ್ಗೆ ಅಂತಾನೇ ಬೇರೆ ಬೇರೆ ಮನೆಗಳು ಇವೆ. ಅವರ ಮನೆಗಳಲ್ಲಿ ಗಾಸಿಪ್ ಸೃಷ್ಟಿ ಆಗುತ್ತವೆ. ಅಲ್ಲಿ ಯಾಕೆ ಹೋಗಿ ಗಾಸಿಪ್ ಬಿಡಬೇಕು ಎಂದರು. ಕೆಲವು ಮಂದಿ ಪಕ್ಷ ಬಿಡುವುದಾಗಿ ಬೆದರಿಕೆ ಹಾಕುವುದು ಸರಿಯಲ್ಲ. ಪಕ್ಷದಿಂದ ಗೆದ್ದಿದ್ದೇವೆ, ಮಂತ್ರಿಗಳಾಗಿದ್ದೇವೆ. ಏನು ಕರ್ನಾಟಕದಲ್ಲಿ ಬಿಜೆಪಿ ಮುಗಿದೋಗಿದೆಯಾ?. ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಕಥೆ ಮುಗಿದೋಯ್ತು ಅಂತಾರೆ. ಇದು ಬಾಲಿಷ ಹೇಳಿಕೆ. ಜಗತ್ತಿನಲ್ಲಿ ಅತೀ ದೊಡ್ಡ ಪಕ್ಷ ಎಂದರೆ ಅದು ಭಾರತೀಯ ಜನತಾ ಪಕ್ಷ ಎಂದು ಟಾಂಗ್ ಕೊಟ್ಟರು.
ರೇಣುಕಾಚಾರ್ಯ ಪಕ್ಷ ಬಿಡುತ್ತಾರೆ ಎಂಬುದು ಸುಳ್ಳು. ಅವರು ಪಕ್ಷ ಬಿಡುವುದಿಲ್ಲ. ಅವರಿಗೆ ಯಾಕೋ ಮನಸ್ಸಿಗೆ ಬೇಜಾರಾಗಿದೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ಒಳ್ಳೆಯದಿನ ಬರುತ್ತದೆ. ಗಡಿಬಿಡಿ ಯಾಕೆ ಮಾಡಿಕೊಳ್ಳಬೇಕು. ಜನ ರೆಸ್ಟ್ ಕೊಟ್ಟಿದ್ದಾರೆ. ಹಾಗಾಗಿ, ಸ್ವಲ್ಪ ದಿನ ರೆಸ್ಟ್ ಮಾಡಲಿ ಎಂದು ಹೇಳಿದರು.