ಮಂಗಳೂರು:ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಭಾಷೆಯನ್ನಾಗಿ ಘೋಷಣೆ ಮಾಡುವುದು ಮತ್ತು ಕಂಬಳದಲ್ಲಿ ದಾಖಲೆ ನಿರ್ಮಾಣ ಮಾಡುವುದಕ್ಕಾಗಿ ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡಲಾಗುತ್ತಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಕೋಡಿಂಬಾಳ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಇಂದು ಮಾತನಾಡಿದ ಅವರು, ತುಳು ಭಾಷೆಯನ್ನು ಹೆಚ್ಚುವರಿ ಭಾಷೆಯನ್ನಾಗಿ ಘೋಷಣೆ ಮಾಡಲು ಐದು ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಬರಬೇಕು. ನಾನು ವಿಧಾನಸಭೆಯಲ್ಲಿ ತುಳುವಿನ ಬಗ್ಗೆ ಮಾತನಾಡಿದಾಗಲೇ 5 ಇಲಾಖೆಗಳಿಗೆ ಪತ್ರ ಹೋಗಿದೆ. ಅಧಿಕಾರಿಗಳು ಅದನ್ನು ಫಾಲೋಅಪ್ ಮಾಡುತ್ತಿದ್ದಾರೆ. ಒಂದು ಇಲಾಖೆಯಿಂದ ಎನ್ಒಸಿ ಬಂದಿದ್ದು, ಉಳಿದ ನಾಲ್ಕು ಇಲಾಖೆಗಳಿಂದ ಎನ್ಒಸಿ ಬರಬೇಕಿದೆ. ಅದು ಬಂದ ತಕ್ಷಣ ಹೆಚ್ಚುವರಿ ಭಾಷೆಯನ್ನಾಗಿ ಘೋಷಿಸುವ ಕಾರ್ಯ ಆಗಲಿದೆ ಎಂದರು.
ಈ ಬಾರಿ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಯಾರಾಗುತ್ತಾರೋ ಅವರಿಗೆ ಅದನ್ನು ಟಾರ್ಗೆಟ್ ನೀಡಿ ಎನ್ಒಸಿಯನ್ನು ತಕ್ಷಣ ಕಾರ್ಯ ಮಾಡುತ್ತೇವೆ. ಈ ಮೂಲಕ ತುಳುವನ್ನು ರಾಜ್ಯದಲ್ಲಿ ಹೆಚ್ಚುವರಿ ಭಾಷೆಯನ್ನಾಗಿ ಮಾಡುವ ಕೆಲಸವನ್ನು ಮಾಡಿಯೇ ಮಾಡುತ್ತೇವೆ ಎಂದು ಹೇಳಿದರು.
ಕಂಬಳದ ಕರೆಯ ಉದ್ದ ಸಾಮಾನ್ಯ 145ಮೀ. ಇದ್ದು ಬೆಂಗಳೂರು ಕಂಬಳದಲ್ಲಿ ಕರೆಯ ಉದ್ದ 155 ಮೀ. ಇರಲಿದೆ. ಬೆಂಗಳೂರು ಕಂಬಳ ಎಲ್ಲದರಲ್ಲೂ ದಾಖಲೆ ಮಾಡಲಿದೆ. ಕಂಬಳದ ಕರೆಯ ಹೆಸರು ಇನ್ನೂ ನಿರ್ಧಾರವಾಗಿಲ್ಲ. ಮಹಾರಾಣಿಯವರಿಗೆ ಸಂಬಂಧಿಸಿದ ಹೆಸರನ್ನಿಡಲು ಅವರು ಸಮ್ಮತಿಸಿಲ್ಲ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ 230ರಷ್ಟು ಹೆಸರುಗಳು ಬಂದಿದೆ. ಪ್ರಮುಖರೊಂದಿಗೆ ಚರ್ಚೆ ಮಾಡಿ ನವೆಂಬರ್ 4-5ರೊಳಗೆ ಕರೆಗೆ ಹೆಸರನ್ನು ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಮುಂದುವರೆದು, ನಾನು ಶಾಸಕನಾಗುವುದಕ್ಕಿಂತ ಮೊದಲು ಉದ್ಯಮಿ. ಆದರೆ ನಾನು ಬಡತನದಿಂದ ಬೆಳೆದವನು. ಸ್ಕೂಲ್ ಮಾಸ್ಟರ್ ಆಗಿದ್ದ ನನ್ನ ತಂದೆ ಸಣ್ಣ ಮೊತ್ತಕ್ಕೆ ದುಡಿಯುತ್ತಿದ್ದರು. ಆದ್ದರಿಂದ ನಾವು 5 ವರ್ಷಗಳ ಕಾಲ ದನದ ಹಟ್ಟಿಯಂತಹ ಕೋಣೆಯಲ್ಲಿ ಜೀವನ ನಡೆಸಿದ್ದೆವು. ನಾನು ಶಾಲೆಗೆ ಹೋಗುವಾಗಲೇ ಕೆಲಸ ಮಾಡುತ್ತಿದ್ದೆ. ಪಿಯುಸಿ ಮಾಡುವಾಗ ಮೈಸೂರಿನಲ್ಲಿ ಹಂತಹಂತವಾಗಿ ಸಣ್ಣ ಏಜೆನ್ಸಿ ಆರಂಭಿಸಿ ಸೈಕಲ್ನಲ್ಲಿ ಜ್ಯೂಸ್ ಡೆಲಿವರಿ ಮಾಡುತ್ತಿದ್ದೆ. ನನ್ನ ಕ್ಲಾಸಿನ ಹುಡುಗಿಯರು ಬಂದಾಗ ಮುಜುಗರವಾಗಿ ಅವರು ಹೋಗುವವರೆಗೆ ಕಾದು ಆ ಬಳಿಕ ಡೆಲಿವರಿ ಮಾಡಲು ಹೋಗುತ್ತಿದ್ದೆ. ಕಾಲೇಜು ಮುಗಿಸುವ ವೇಳೆ ಎರಡು ಕೋಟಿ ರೂ. ವಹಿವಾಟಿನ ವ್ಯವಹಾರ ಮಾಡುತ್ತಿದ್ದೆ. ಆ ಬಳಿಕ ಊರಿಗೆ ಬಂದು ಉದ್ಯಮ ಆರಂಭಿಸಿ ಈ ಮಟ್ಟಕ್ಕೆ ಬಂದಿದ್ದೇನೆ ಎಂದು ಅಶೋಕ್ ರೈ ತಿಳಿಸಿದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಕಂಬಳ ಸ್ಪರ್ಧೆ ಆಯೋಜಿಸಲು ಭರದ ಸಿದ್ಧತೆ: ಕರಾವಳಿಯ ಜನಪದ ಕ್ರೀಡೆಗೆ 1 ಕೋಟಿ ರೂಪಾಯಿ ಅನುದಾನ- ಡಿ.ಕೆ.ಶಿವಕುಮಾರ್