ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆ ನಡುವೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಿಂದ ಕಾಶಿಯಾತ್ರೆ ಆರಂಭವಾಗಿದೆ. ಸಚಿವ ಮುರುಗೇಶ್ ನಿರಾಣಿ ವಾರಾಣಸಿಗೆ ಭೇಟಿ ನೀಡಿದ್ದ ಬೆನ್ನಲ್ಲೇ ಇದೀಗ ಶಾಸಕ ಅರವಿಂದ ಬೆಲ್ಲದ್ ಕೂಡ ವಾರಾಣಸಿಯ ವಿಶ್ವನಾಥನ ಮೊರೆ ಹೋಗಿದ್ದಾರೆ.
ನಿನ್ನೆ ನಿರಾಣಿ, ಇಂದು ಬೆಲ್ಲದ್: ಕಾಶಿ ವಿಶ್ವನಾಥನ ಮೊರೆ ಹೋದ ಸಿಎಂ ಸ್ಥಾನದ ಆಕಾಂಕ್ಷಿಗಳು..! - ಸಿಎಂ ಬದಲಾವಣೆ
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಕೂಗು ಜೋರಾಗಿರುವ ನಡುವೆ ಬಿಜೆಪಿ ನಾಯಕರು ಟೆಂಪಲ್ ರನ್ ಆರಂಭಿಸಿದ್ದಾರೆ. ಇದೀಗ ಶಾಸಕ ಅರವಿಂದ್ ಬೆಲ್ಲದ್ ವಾರಾಣಸಿಗೆ ಭೇಟಿ ನೀಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಸಿಎಂ ವಿರೋಧ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕ ಅರವಿಂದ ಬೆಲ್ಲದ್ ವಾರಾಣಸಿಗೆ ತೆರಳಿದ್ದಾರೆ. ಕಾಶಿ ವಿಶ್ವನಾಥನ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದು, ಇಷ್ಟಾರ್ಥ ಸಿದ್ದಿಗಾಗಿ ಆಪ್ತರು ನೀಡಿದ ಸಲಹೆಯಂತೆ ಬೆಲ್ಲದ್ ವಾರಾಣಸಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿಗೂ ಕಾಶಿ ವಿಶ್ವನಾಥನ ದರ್ಶನ ಮಾಡಿ ಮಹತ್ವದ ಕೆಲಸ ಮಾಡುವ ಪರಿಪಾಠವಿದ್ದು, ಅದರಂತೆ ಅರವಿಂದ ಬೆಲ್ಲದ್ ಕೂಡ ವಾರಾಣಸಿಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.
ಎರಡು ದಿನಗಳ ಹಿಂದೆಯಷ್ಟೇ ಸಚಿವ ಮುರುಗೇಶ್ ನಿರಾಣಿ ವಾರಾಣಸಿಗೆ ತೆರಳಿ ಕಾಶಿ ವಿಶ್ವನಾಥನ ದರ್ಶನ ಮಾಡಿ ಬಂದಿದ್ದರು. ಇಂದು ಶಾಸಕ ಬೆಲ್ಲದ್ ಸಹ ದೇವಾಲಯ ಪ್ರವಾಸ ಕೈಗೊಂಡಿದ್ದಾರೆ. ಇನ್ನೊಂದು ಕಡೆ ಜಗದೀಶ್ ಶೆಟ್ಟರ್ ದೆಹಲಿಯಲ್ಲಿ ನಾಯಕರ ಭೇಟಿಯಾಗಿದ್ದಾರೆ. ಅಲ್ಲದೇ ನಿರಾಣಿ ತಮ್ಮ ಪುತ್ರನ ಮೂಲಕ ತಮ್ಮ ಅಪೇಕ್ಷೆಯನ್ನು ಹೈಕಮಾಂಡ್ಗೆ ತಲುಪಿಸುವ ಪ್ರಯತ್ನ ನಡೆಸಿದ್ದಾರೆ.