ಬೆಂಗಳೂರು: ಧರ್ಮೇಗೌಡರ ನಿಧನದಿಂದ ತೆರವಾಗಿದ್ದ ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಎಂ.ಕೆ. ಪ್ರಾಣೇಶ್ ನಾಮಪತ್ರ ಸಲ್ಲಿಸಿದರು.
ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ ಅವರ ಕಚೇರಿಗೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ಪ್ರಾಣೇಶ್, ಡಿಸಿಎಂ ಲಕ್ಷ್ಮಣ್ ಸವದಿ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್, ಆಯನೂರು ಮಂಜುನಾಥ್ ಸೇರಿದಂತೆ ಬಿಜೆಪಿ ಹಿರಿಯ ಪರಿಷತ್ ಸದಸ್ಯರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.
ಎಂ.ಕೆ. ಪ್ರಾಣೇಶ್ ನಾಮಪತ್ರ ಸಲ್ಲಿಕೆ ನಂತರ ಕಂದಾಯ ಸಚಿವ ಆರ್. ಅಶೋಕ್ ಹಾಗು ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಆಗಮಿಸಿದರು. ಅವರ ಸಮ್ಮುಖದಲ್ಲಿ ಎರಡನೇ ಪ್ರತಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಸದಸ್ಯರು ಹುಟ್ಟುಹಬ್ಬದ ಶುಭಾಶಯ ಕೋರಿದರು.
ಉಪಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಮುನ್ನ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಅವರ ಕೊಠಡಿಯಲ್ಲಿ ಸದಸ್ಯರ ಜೊತೆ ಅಭ್ಯರ್ಥಿ ಪ್ರಾಣೇಶ್ ಒಟ್ಟಿಗೆ ಕುಳಿತು ಉಪಹಾರ ಸೇವಿಸಿದರು. ನಂತರ ನಾಮಪತ್ರ ಸಲ್ಲಿಸಲು ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಅವರ ಕೊಠಡಿಗೆ ಆಗಮಿಸಿದರು. ಈ ವೇಳೆ ಕಚೇರಿ ಪ್ರವೇಶ ದ್ವಾರದ ಬಳಿ ಹಿಂದೆ ನಿಂತಿದ್ದ ಪ್ರಾಣೇಶ್ ಅವರನ್ನು ಬಾರಪ್ಪ ಮದುಮಗ ಎಂದು ಎನ್ನುತ್ತಾ ಕರೆದೊಯ್ದರು.
ಎತ್ತರ ಲೆಕ್ಕಾಚಾರ: ನಾಮಪತ್ರ ಸಲ್ಲಿಕೆಗೂ ಮೊದಲು ಪರಿಷತ್ ಕಾರ್ಯದರ್ಶಿ ಕಚೇರಿಯಲ್ಲಿ ಹಾಸ್ಯದ ಹೊನಲು ಹರಿಯಿತು. ಅಭ್ಯರ್ಥಿ ಪ್ರಾಣೇಶ್ ಎತ್ತರದ ಬಗ್ಗೆ ಹಾಸ್ಯ ಮಾಡಿದ ಬಿಜೆಪಿ ಸದಸ್ಯರು ಕಲಾಪ ಹೇಗೆ ನಡೆಸಬೇಕು ಎನ್ನುವ ಟಿಪ್ಸ್ ನೀಡಿದರು.
ಮೊದಲ ಪ್ರತಿ ನಾಮಪತ್ರ ಸಲ್ಲಿಸಿದ ನಂತರ ತಡವಾಗಿ ಆಗಮಿಸಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಎರಡನೇ ಪ್ರತಿ ನಾಮಪತ್ರ ಸಲ್ಲಿಕೆಗೆ ಸಾಥ್ ನೀಡಿದರು. ಈ ವೇಳೆ ಹೊರಟ್ಟಿ ಅವರನ್ನು ಸನ್ಮಾನ್ಯ ಸಭಾಪತಿಗಳೇ ಎಂದು ಕರೆಯುವ ಮೂಲಕ ಬಿಜೆಪಿಯ ಅರುಣ್ ಶಹಾಪುರ್ ಬಾವಿ ಸಭಾಪತಿಗೆ ಶುಭಾಶಯ ಕೋರಿದರು.