ಬೆಂಗಳೂರು : ವಯೋವೃದ್ಧರಿಗಾಗಿ ಇರುವ ಸರ್ಕಾರದ ಸಂಧ್ಯಾಸುರಕ್ಷಾ ಯೋಜನೆಯನ್ನು ದುರ್ಬಳಕೆ ಮಾಡುತ್ತಿರುವ ಆರೋಪದಡಿ ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿರಿಯ ನಾಗರಿಕರಿಗೆ ಕೊಡುವ ವೃದ್ಧಾಪ್ಯ ವೇತನ ಸೌಲಭ್ಯವನ್ನು ರಾಜಾಜಿನಗರ, ಜಯನಗರದ ನಾಡ ಕಚೇರಿಗಳಲ್ಲಿ ದಲ್ಲಾಳಿಗಳು ಹಾಗೂ ಕೆಲ ಅಧಿಕಾರಿಗಳು ಕೈಜೊಡಿಸಿ ಹಣ ಕೊಟ್ಟವರಿಗೆ ಮಾಡಿಕೊಡುತ್ತಿರುವ ಆತಂಕಕಾರಿ ವಿಚಾರ ಬಯಲಾಗಿದೆ. ಈ ಬಗ್ಗೆ ರಮೇಶ್ ಎಂಬುವವರು ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ.
ವೃದ್ಧಾಪ್ಯ ವೇತನ ಪಡೆಯಲು ಮುಖ್ಯವಾಗಿ 60 ವರ್ಷ ವಯಸ್ಸಾಗಿರಬೇಕು. ಹಾಗೂ ಬಡತನ ರೇಖೆಗಿಂತ ಕೆಳಗಿರುವ ವೃದ್ಧರು ಮಾತ್ರ ಈ ಯೋಜನೆಗೆ ಅರ್ಹರು. ಇದಲ್ಲದೆ ಯೋಜನೆಯ ಲಾಭ ಪಡೆಯಲು ಆದಾಯ ಪ್ರಮಾಣಪತ್ರ ಹಾಗೂ ಆಧಾರ್ ಕಾರ್ಡ್ ಕಡ್ಡಾಯ. ಆದರೆ ಆಧಾರ್ ಕಾರ್ಡನ್ನು ಕಂಪ್ಯೂಟರ್ ಮೂಲಕ ತಿದ್ದುಪಡಿ ಮಾಡುತ್ತಿರುವ ವಂಚಕರು 60 ವರ್ಷ ವಯಸ್ಸಿನಂತೆ ಆಧಾರ್ ಕಾರ್ಡ್ ಮಾಡಿ ಕೊಡುತ್ತಿದ್ದಾರೆ. ಸೈಬರ್ ಅಪರೇಟರ್ ಗಳೇ ವೆಬ್‌ಸೈಟಿಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕಂಡ ಕಂಡವರು ಯೋಜನೆ ಲಾಭ ಪಡೆಯವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇಷ್ಟೆಲ್ಲವನ್ನೂ ನಕಲಿ ಮಾಡಿದರೂ ಸಹ ವೆಬ್‌ಸೈಟಿಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡುವಾಗ ಉಪತಹಶೀಲ್ದಾರ್ ಮಟ್ಟದ ಅಧಿಕಾರಿಯ ಡಿಜಿಟಲ್ ಬೆರಳಚ್ಚು ಅಗತ್ಯವಿದೆ. ಆದರೆ ಬೆರಳಚ್ಚು ಕೂಡಾ ಬಳಕೆ ಆಗುತ್ತಿರುವುದರಿಂದ ಉಪತಹಶೀಲ್ದಾರ್ವೊಬ್ಬರ ಹೆಸರು ಕೂಡ ಕೇಳಿ ಬಂದಿದೆ.
ಸದ್ಯ ಈ ಕುರಿತು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ. ಈಗಾಗಲೇ ಸೈಬರ್ ಸೆಂಟರಿಗೆ ಸೇರಿದ ಓರ್ವನನ್ನ ಬಂಧಿಸಲಾಗಿದ್ದು ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.