ಬೆಂಗಳೂರು: ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿಜೇತಗೊಂಡು ಮಿಸ್ಟರ್ ಆಂಧ್ರ ಎಂದೇ ಬಿರುದು ಪಡೆದುಕೊಂಡಿದ್ದ ಯುವಕ ಸುಲಭವಾಗಿ ಹಣ ಸಂಪಾದನೆ ಮಾಡಲು ವಾಮ ಮಾರ್ಗ ತುಳಿದು ಪೊಲೀಸರ ಅತಿಥಿಯಾಗಿದ್ದಾನೆ. ಹೌದು ಆಂಧ್ರ ಸೇರಿ ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ ಬಾಡಿ ಬಿಲ್ಡರ್ ಸೇರಿ ಇಬ್ಬರನ್ನು ಗಿರಿನಗರ ಠಾಣೆ ಆರಕ್ಷಕರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಿಸ್ಟರ್ ಆಂಧ್ರ ಖ್ಯಾತಿಯ ಸೈಯ್ಯದ್ ಬಾಷಾ ಹಾಗೂ ಸಹಚರ ಶೇಖ್ ಆಯೂಬ್ ಬಂಧಿತ ಆರೋಪಿಗಳಿಂದ 6 ಲಕ್ಷ ಮೌಲ್ಯದ ಚಿನ್ನದ ಸರ ಹಾಗೂ ಎರಡು ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ. ಆಂಧ್ರದ ಕಡಪ ಮೂಲದ ಸೈಯ್ಯದ್ ಭಾಷಾ 2005 ರಿಂದ 2015 ರ ಕುವೈತ್ನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ವಿದೇಶದಲ್ಲಿರುವಾಗಲೇ ಗೋಲ್ಡ್ ಸ್ಮಗ್ಲಿಂಗ್ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ. ಕೊರೊನಾ ಬಿಕ್ಕಟ್ಟು ಹಿನ್ನೆಲೆಯಲ್ಲಿ ಭಾರತಕ್ಕೆ ಬಂದಿದ್ದ ಈತ ದೈಹಿಕ ಕಸರತ್ತು ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ. ದೇಹದಾರ್ಡ್ಯ ಸ್ಪರ್ಧೆಗಳಲ್ಲಿ ಭಾಗಿಯಾಗಿ ಮಿಸ್ಟರ್ ಆಂಧ್ರ ಎಂದು ಪಟ್ಟಗಿಟ್ಟಿಸಿಕೊಂಡಿದ್ದ. ಸುಲಭವಾಗಿ ಹಣ ಸಂಪಾದನೆ ಮಾಡಲು ಅಡ್ಡದಾರಿ ತುಳಿದ ಅಪರಾಧ ಲೋಕದ ಪಾತಕಿಗಳ ಸಂಪರ್ಕ ಬೆಳೆಸಿಕೊಂಡು ನಿರಂತರವಾಗಿ ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ.
ಹೀಗಾಗಿ ಸ್ಥಳೀಯ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಸೆರೆಮನೆಯಲ್ಲಿರುವಾಗ ಕೈದಿಯೊಬ್ಬ ಬೆಂಗಳೂರಿನಲ್ಲಿ ಸುಲಭವಾಗಿ ಕಳ್ಳತನ ಮಾಡಬಹುದು ಎಂದು ಸಲಹೆ ನೀಡಿದ್ದ. ಇದರಂತೆ ಜಾಮೀನು ಪಡೆದು ಹೊರಬಂದು ಬೆಂಗಳೂರಿಗೆ ಬಂದಿದ್ದ. ಆರೋಪಿ ಗಿರಿನಗರ ಹಾಗೂ ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸರಗಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧನ ಭೀತಿಯಿಂದ ಮೊಬೈಲ್ ಬಳಸುತ್ತಿರಲಿಲ್ಲ:ರಾಜಧಾನಿಗೆ ಬಂದು ಕದ್ದ ಬೈಕ್‌ನಲ್ಲಿ ಸರಗಳ್ಳತನ ಮಾಡಲು ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯನ್ನೇ ಟಾರ್ಗೆಟ್ ಮಾಡಿಕೊಂಡಿದ್ದರು. ಒಂಟಿಯಾಗಿ ಓಡಾಡುವ ವೃದ್ದೆಯರು ಹಾಗೂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ. ಕೃತ್ಯವೆಸಗಿದ ಬಳಿಕ ಬೆಂಗಳೂರು ತೊರೆಯದೇ ಠಾಣಾ ವ್ಯಾಪ್ತಿಯಲ್ಲಿ ಓಡಾಡಿಕೊಂಡಿದ್ದರು.