ಬೆಂಗಳೂರು :ಕಾಣೆಯಾಗಿದ್ದ ಮಹಿಳೆಯನ್ನು 16 ದಿನಗಳ ನಿರಂತರ ಹುಡುಕಾಟ ನಡೆಸಿ ಪತ್ತೆ ಮಾಡಿದ ಅಮೃತಹಳ್ಳಿ ಪೊಲೀಸರು, ತಂಗಿಯನ್ನು ಅಣ್ಣನಿಗೆ ಒಪ್ಪಿಸಿ ಅರ್ಥಪೂರ್ಣ ರಕ್ಷಾಬಂಧನ ಆಚರಣೆಗೆ ಕಾರಣರಾದರು.
ಅರ್ಥಪೂರ್ಣ ರಕ್ಷಾ ಬಂಧನಕ್ಕೆ ಕಾರಣರಾದ ಅಮೃತಹಳ್ಳಿ ಪೊಲೀಸ್..! ಸಹೋದರಿ ನಾಪತ್ತೆಯಾಗಿದ್ದ ನೋವಿನಲ್ಲಿದ್ದ ಸಹೋದರನಿಗೆ ಕಾಕತಾಳೀಯ ಎಂಬಂತೆ ರಕ್ಷಾ ಬಂಧನ ದಿನದಂದೇ ಪೊಲೀಸರು ಆತನ ತಂಗಿಯನ್ನು ಪತ್ತೆ ಮಾಡಿದ್ದಾರೆ. ಇದೇ ಖುಷಿಯಲ್ಲಿ ತಂಗಿಗೆ ರಾಖಿ ಕಟ್ಟಿ ಕೇಕ್ ತಿನ್ನಿಸಿ ಸಹೋದರ ಸಂಭ್ರಮಿಸಿದ್ದಾನೆ. ಸದ್ಯ ಇದಕ್ಕೆ ಕಾರಣರಾದ ಪೊಲೀಸರಿಗೆ ಕುಟುಂಬಸ್ಥರು ಧನ್ಯವಾದ ಅರ್ಪಿಸಿದರು.
ಪ್ರಕರಣದ ಹಿನ್ನೆಲೆ
ಆ.6ರಂದು ಅಮೃತಹಳ್ಳಿಯ ಆಸ್ಟರ್ ಆಸ್ಪತ್ರೆಯಿಂದ ತನ್ನ ತಾಯಿ ರಿಮಿ ಅಡ್ಡಿ ಎಂಬುವರು ಕಾಣೆಯಾಗಿದ್ದಾರೆಂದು ವಿವೇಕ್ ಅಡ್ಡಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಪರಿಶೀಲಿಸಿದಾಗ ಅಪರಿಚಿತನೊಬ್ಬ ಬೈಕ್ನಲ್ಲಿ ಕೂರಿಸಿಕೊಂಡು ಹೋಗಿರುವುದು ಕಂಡು ಬಂದಿತ್ತು.
ಪ್ರಾರಂಭದಲ್ಲಿ ಮಹಿಳೆ ಕಿಡ್ನ್ಯಾಪ್ ಆಗಿರಬಹುದು ಎಂದು ಗುಮಾನಿ ವ್ಯಕ್ತಪಡಿಸಿದ್ದ ಪೊಲೀಸರು, ಏರಿಯಾ ಸುತ್ತಮುತ್ತಲಿನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ವೀರಣ್ಣನಪಾಳ್ಯದಲ್ಲಿ ಬೈಕ್ನಲ್ಲಿ ಮಹಿಳೆ ಇಳಿದಿರುವುದು ಗೊತ್ತಾಗಿದೆ. ಆ ಬಳಿಕ ಸುಮಾರು 400ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದರೂ ಮಹಿಳೆ ಓಡಾಡಿರುವ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ, ಮಹಿಳೆಯು ಮಿಸ್ಸಿಂಗ್ ಆಗಿರುವುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದರು.
50ಕ್ಕೂ ಹೆಚ್ಚು ಆಶ್ರಮಗಳಲ್ಲಿ ಹುಡುಕಾಟ :ನಾಪತ್ತೆಯಾಗಿರುವ ಮಹಿಳೆಯನ್ನು ಪತ್ತೆ ಮಾಡಲು ಡಿ.ಜೆ.ಹಳ್ಳಿ, ಗೋವಿಂದಪುರ ಹಾಗೂ ಕೆಜಿಹಳ್ಳಿ ಸುತ್ತಮುತ್ತಲಿನ 100 ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದರು. 50ಕ್ಕೂ ಹೆಚ್ಚು ಆಶ್ರಮಗಳಿಗೆ ಕರೆ ಮಾಡಿ ವಿಚಾರಿಸಿದ್ದರು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಶೋಧ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸಾರ್ವಜನಿಕರ ಮಾಹಿತಿ ಭಿತ್ತಿಪತ್ರ ಹೊರಡಿಸಿ ಹಂಚಿಕೆ ಮಾಡಿದ್ದರು.
ಮಹಿಳೆಯ ಪತ್ತೆಗೆ ಸಹಕಾರಿಯಾದ ಸೋಷಿಯಲ್ ಮೀಡಿಯಾ:ಮಹಿಳೆ ಮಿಸ್ಸಿಂಗ್ ಕುರಿತು ಪೊಲೀಸರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದನ್ನು ಕಂಡ ವ್ಯಕ್ತಿಯೊಬ್ಬರು ಮಹಿಳೆಯು ತಾವರೆಕರೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಚಿಗೊಪ್ಪ ಬಳಿಯ ಆಶ್ರಮದಲ್ಲಿ ಇರುವುದಾಗಿ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋದ ಪೊಲೀಸರು ಇಂದು ಆಕೆಯನ್ನು ಕರೆ ತಂದಿದ್ದಾರೆ.
ಮಹಿಳೆ ನಾಪತ್ತೆಗೆ ಕಾರಣವೇನು..?
ಜಾರ್ಖಂಡ್ ಮೂಲದ ರಿಮಿ ಅಡ್ಡಿ ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಈಕೆಗೆ ಬಂಗಾಳಿ ಹೊರತುಪಡಿಸಿದರೆ ಕನ್ನಡ, ಹಿಂದಿ ಸಹ ಬರುವುದಿಲ್ಲ. ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಆಸ್ಪತ್ರೆಯಿಂದ ಮನೆಗೂ ದಾರಿ ತಿಳಿಯದ ಕಾರಣ ಮಿಸ್ಸಿಂಗ್ ಆಗಿದ್ದರು. ನಾಪತ್ತೆಯ ಕುರಿತು ಈಕೆಯ ಮಗ ವಿವೇಕ್ ಅಡ್ಡಿ ದೂರು ನೀಡಿದ್ದರು ಎಂದು ನಗರ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.