ಬೆಂಗಳೂರು: ನಗರದ ಕೇಂದ್ರ ಭಾಗ ಫ್ರೀಡಂ ಪಾರ್ಕ್ ಬಳಿ ನಿರ್ಮಾಣವಾಗುತ್ತಿರುವ ಬಹುಮಹಡಿ ಪಾರ್ಕಿಂಗ್ ಕಟ್ಟಡದ ನಿರ್ಮಾಣ ಕಾಮಗಾರಿ 2015 ರಲ್ಲೇ ಆರಂಭವಾದರೂ ಇನ್ನೂ ಪೂರ್ಣಗೊಂಡಿಲ್ಲ. ಇದೇ ಸೆಪ್ಟಂಬರ್ 13 ರಂದು ಉದ್ಘಾಟನೆಗೊಳ್ಳುತ್ತದೆ ಎಂದಿದ್ದ ಮೇಯರ್ ಗಂಗಾಂಬಿಕೆ ಕೂಡಾ ಮಾತು ತಪ್ಪಿದ್ದಾರೆ. ಕಾರಣಾಂತರಗಳಿಂದ ಉದ್ಘಾಟನೆಗೊಳ್ಳುತ್ತಿಲ್ಲ ಎಂದ ಅವರು, ತಮ್ಮ ಅಧಿಕಾರ ಅವಧಿಯಲ್ಲಿ ಇದು ಪೂರ್ಣ ಆಗುವುದಿಲ್ಲ ಎಂದು ಕೈಚೆಲ್ಲಿದ್ದಾರೆ.
ಮಾತು ತಪ್ಪಿದ ಮೇಯರ್: ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಾಣ ಅಪೂರ್ಣ!
ವಾಹನಗಳ ನಿಲುಗಡೆಗಾಗಿ ಬೃಹತ್ ಪಾರ್ಕಿಂಗ್ ಬಹುಮಹಡಿ ಕಟ್ಟಡ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದೇ ತಿಂಗಳ 13 ರಂದು ಉದ್ಘಾಟಿಸುತ್ತೇವೆ ಎಂದಿದ್ದ ಮೇಯರ್ ಗಂಗಾಬಿಂಕೆ ಕೂಡ ಈಗ ಕೈಚೆಲ್ಲಿದ್ದಾರೆ.
2015 ರಲ್ಲೇ ಬಿಬಿಎಂಪಿಯ ಈ ಬೃಹತ್ ಯೋಜನೆ ಆರಂಭವಾಗಿದ್ದು, ಬರೋಬ್ಬರಿ ನಾಲ್ಕು ವರ್ಷ ಮೂವರು ಮೇಯರ್ ಅವಧಿ ಪೂರ್ಣಗೊಂಡರೂ ಕಟ್ಟಡ ನಿರ್ಮಾಣ ಮಾತ್ರ ಪೂರ್ಣಗೊಂಡಿಲ್ಲ. ಸ್ಥಳೀಯ ಗಾಂಧಿನಗರ ಕಾರ್ಪೊರೇಟರ್ ಲತಾ ರಾಥೋಡ್, ಕಾಮಗಾರಿ ಪೂರ್ಣಗೊಳ್ಳುವುದು ಇನ್ನೂ ಎರಡು ತಿಂಗಳಾಗಬಹುದು. ಕೆಲಸ ನಡೆಯುತ್ತಿದೆ ಎಂದಿದ್ದಾರೆ. ಆದ್ರೆ ಅದೇ ಕಾಮಗಾರಿಯ ಕೆಲಸಗಾರರ ಪ್ರಕಾರ ಕಾಮಗಾರಿ ಮುಗಿಯುವುದು ಇನ್ನೂ ಎಂಟು ತಿಂಗಳಾಗಬಹುದು ಎನ್ನುತ್ತಿದ್ದಾರೆ. ಅಲ್ಲಿವರೆಗೂ ಮೆಜೆಸ್ಟಿಕ್, ಗಾಂಧಿನಗರದ ವಾಹನ ಸವಾರರಿಗೆ ಪಾರ್ಕಿಂಗ್ ಸೌಲಭ್ಯ ಒದಗಿಸಲು ಸಾಧ್ಯವಾಗಲ್ಲ ಎನ್ನಲಾಗ್ತಿದೆ.
ಸೂಕ್ತ ಪಾರ್ಕಿಂಗ್ ಸೌಲಭ್ಯಕ್ಕಾಗಿ ಬಿಬಿಎಂಪಿ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ 79 ಕೋಟಿ ರುಪಾಯಿ ವೆಚ್ಚದಲ್ಲಿ ಗುತ್ತಿಗೆ ನೀಡಿದೆ. 500 ದ್ವಿಚಕ್ರ ವಾಹನಗಳು, 556 ಕಾರುಗಳಿಗೆ ಪಾರ್ಕಿಂಗ್ ಸೌಲಭ್ಯ ಇರುವ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದರೂ ಸೂಕ್ತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಪಾಲಿಕೆ ಸೋತಿದೆ.