ಬೆಂಗಳೂರು: ಕೋವಿಡ್ ಕುರಿತು ಜಾಗೃತಿ ಜಾಹೀರಾತು ಅಳವಡಿಸುವ ಸಂದರ್ಭದಲ್ಲಿ ನ್ಯಾಯಾಲಯದ ಅನುಮತಿ ದುರ್ಬಳಕೆ ಮಾಡಿಕೊಂಡು ಖಾಸಗಿ ಕಂಪನಿಗಳ ಜಾಹೀರಾತಿಗೆ ಅವಕಾಶ ನೀಡಿದ್ದ ಪ್ರಕರಣದಲ್ಲಿ ಜಾಹೀರಾತುದಾರರಿಗೆ ವಿಧಿಸಿರುವ 18 ಲಕ್ಷ ರೂ. ತೆರಿಗೆ ಹಣವನ್ನು ಒಂದು ವಾರದಲ್ಲಿ ವಸೂಲಿ ಮಾಡಿ ಬಿಬಿಎಂಪಿಗೆ ಪಾವತಿಸಬೇಕು. ಒಂದು ವೇಳೆ ತಪ್ಪಿದ್ರೆ ಸರ್ಕಾರವೇ ಆ ಮೊತ್ತವನ್ನು ಪಾಲಿಕೆಗೆ ಭರಿಸಬೇಕಾಗುತ್ತದೆ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಕೋವಿಡ್ ಕುರಿತು ಜಾಗೃತಿ ಜಾಹೀರಾತು ಅಳವಡಿಕೆಗೆ ಅನುಮತಿ ನೀಡುವ ವೇಳೆ ಹೈಕೋರ್ಟ್ ವಿಧಿಸಿದ್ದ ಷರತ್ತುಗಳನ್ನು ಸರ್ಕಾರ ಉಲ್ಲಂಘಿಸಿದೆ ಎಂದು ಆರೋಪಿಸಿ ವಕೀಲ ಜಿ.ಆರ್. ಮೋಹನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಹಿಂದಿನ ವಿಚಾರಣೆ ವೇಳೆ ಕೊರೊನಾ ಜಾಗೃತಿ ಹೆಸರಲ್ಲಿ ಖಾಸಗಿ ಜಾಹೀರಾತು ಅಳವಡಿಸಿದ್ದನ್ನು ಗಮನಿಸಿದ್ದ ಪೀಠ, ಸರ್ಕಾರಕ್ಕೆ ನೀಡಿದ್ದ ಅನುಮತಿ ಹಿಂಪಡೆದಿತ್ತು. ಜತೆಗೆ ಖಾಸಗಿ ಜಾಹೀರಾತುಗಳಿದ್ದ ಫಲಕಗಳನ್ನು ಶೀಘ್ರ ತೆರವುಗೊಳಿಸಬೇಕು. ನಗರ ವ್ಯಾಪ್ತಿಯಲ್ಲಿ ಜಾಹೀರಾತು ಫಲಕ ಪ್ರದರ್ಶಿಸಿದ್ದರಿಂದ ಬಿಬಿಎಂಪಿಗೆ 18,04,638 ರೂಪಾಯಿ ತೆರಿಗೆ ಹಣವನ್ನು ವಸೂಲಿ ಮಾಡಿ ಪಾಲಿಕೆಗೆ ಪಾವತಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು.