ಬೆಂಗಳೂರು :ಕರ್ನಾಟಕ ಸಿವಿಲ್ ಸರ್ವೀಸ್ ನಿಯಮಾವಳಿಗೆ ತಿದ್ದುಪಡಿ ಸೇರಿದಂತೆ ಹಲವು ವಿಷಯಗಳಿಗೆ ಇಂದಿನ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ, ಕರ್ನಾಟಕ ಸಿವಿಲ್ ಸರ್ವೀಸ್ ನಿಯಮಾವಳಿಗೆ ತಿದ್ದುಪಡಿ ಮಾಡಿದರೆ ನೇರ ನೇಮಕಾತಿ ಮಾಡಿಕೊಳ್ಳುವ ಇಲಾಖೆಗಳಿಗೆ ಅನ್ವಯವಾಗುತ್ತದೆ ಎಂದರು. ಶಿಕ್ಷಣ ಇಲಾಖೆ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ) : ಕರ್ನಾಟಕ ರಾಜ್ಯ ಸೇವೆಗಳು (ಶಿಕ್ಷಕರ ನಿಯಂತ್ರಣ) (ತಿದ್ದುಪಡಿ) ವಿಧೇಯಕ, 2021ಕ್ಕೆ ಅನುಮೋದನೆ ನೀಡಿದ್ದು, ಅರ್ಧಕ್ಕೆ ನಿಂತಿರುವ ಶಿಕ್ಷಕರ ವರ್ಗಾವಣೆಯನ್ನು ಪೂರ್ಣಗೊಳಿಸಲು ಸುಗ್ರೀವಾಜ್ಞೆ ತರಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಎಲ್ಲ ಚುನಾವಣೆ ಆರು ತಿಂಗಳಕಾಲ ಮುಂದೂಡಿಕೆಗೆ ಶಿಫಾರಸು: ಮದ್ಯಪ್ರಿಯರಿಗೆ ಸಿಹಿ ಸುದ್ದಿ
ಜಿಂದಾಲ್ ಕಂಪನಿಗೆ ತೋರಣಗಲ್ನಲ್ಲಿ ಗುತ್ತಿಗೆ ಆಧಾರದ ಮೇಲೆ ನೀಡಲಾಗಿದ್ದ 3,667ಎಕರೆ ಪ್ರದೇಶವನ್ನು ಎಂಎಂಎಲ್ ವಶಕ್ಕೆ ತೆಗೆದುಕೊಳ್ಳಲು ಕಾನೂನು ಕ್ರಮ ಮುಂದುವರಿಸಲು ಅಡ್ವೊಕೆಟ್ ಜನರಲ್ಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು. 2020-21ನೇ ಸಾಲಿನಲ್ಲಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ (PM-FME) ಯೋಜನೆಯ 493.65 ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ (ಕೇಂದ್ರ ಮತ್ತು ರಾಜ್ಯ ಶೇ. 60:40 ಅನುಪಾತದಲ್ಲಿ). ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೀನುಗಾರಿಕೆ ಬಂದರಿನ 3ನೇ ಹಂತದ ವಿಸ್ತರಣೆಯ ಅವಶ್ಯಕ ಉಳಿಕೆ ಕಾಮಗಾರಿಯನ್ನು 22 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ ಎಂದು ಹೇಳಿದರು. ಎನ್ ಜಿಇಎಫ್ - ಜರ್ಮನಿ ಸಹಭಾಗಿತ್ವದ ಷೇರುಗಳನ್ನು ರಾಜ್ಯ ಸರ್ಕಾರ ಖರೀದಿಸಿ, ಎನ್ ಜಿಇಎಫ್ ಗೆ ಸೇರಿದ 122ಎಕರೆ ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.
ಉಳಿದಂತೆ ಈ ಕೆಳಕಂಡ ವಿಷಯಗಳಿಗೆ ಅನುಮೋದನೆ:ಮಂಗಳೂರು ವಿವಿಯಲ್ಲಿ ಕ್ಯಾಂಪಸ್ ಬಿಲ್ಡಿಂಗ್ಗೆ 63 ಕೋಟಿ ಮಂಜೂರು.
ಮೆ. ಜೆ.ಕೆ. ಸಿಮೆಂಟ್ ವರ್ಕ್ಸ್, ಮುದ್ದಾಪುರ, ಬಾಗಲಕೋಟೆ ಜಿಲ್ಲೆ ಘಟಕಕ್ಕೆ ವ್ಯಾಟ್ ಸಾಲ ಉತ್ತೇಜನದ ಮಾನ್ಯತೆಯ ಅವಧಿಯನ್ನು ದಿನಾಂಕ: 24.10.2019 ರಿಂದ ಎರಡು ವರ್ಷಗಳ ಅವಧಿಗೆ ವಿಸ್ತರಣೆಗೆ ನಿರ್ಧರಿಸಲಾಗಿದೆ. ಬೆಂಗಳೂರಿನ ಅತಿ ಹೆಚ್ಚು ವಾಹನದಟ್ಟಣೆಯ ಪ್ರದೇಶಗಳ ಅಭಿವೃದ್ದಿಗೆ 477 ಕೋಟಿ ರೂ.ಗಳ ಕಾಮಗಾರಿಗೆ ಅನುಮೋದನೆ ಕೊಡಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಸೂರ್ಯನಗರ ಮತ್ತು ಸುತ್ತಮುತ್ತಲಿನ 52 ಜನವಸತಿಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಸಂಯೋಜಿತಗೊಳಿಸಿದ 74.00 ಕೋಟಿ ರೂ.ಗಳ ಮೊತ್ತದ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಮಂಡ್ಯದ ಆದಿಚುಂಚನಗಿರಿ ಆಸ್ಪತ್ರೆ ವಿಸ್ತರಣೆಗೆ 22ಎಕರೆ ಜಮೀನು ಮಂಜೂರು ಮಾಡಲಾಗಿದೆ. ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು, ಮೂಕನಹಳ್ಳಿ ಗ್ರಾಮದ ಸ.ನಂ. 90ರಲ್ಲಿ 2 ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಹುಣಸೂರು ತಾಲ್ಲೂಕು ಒಕ್ಕಲಿಗರ ಸಂಘಕ್ಕೆ ಮಂಜೂರಾತಿ ನೀಡಿ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ.