ಬೆಂಗಳೂರು:ಸಾಮಾನ್ಯ ರೈಲುಗಳು ಚಲಿಸುತ್ತಿದ್ದರೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಮಾಡುತ್ತಿದ್ದ ವರದಿಗಳನ್ನ ನಾವು ಸಾಮಾನ್ಯವಾಗಿ ಗಮನಿಸಿದ್ದೇವೆ. ಆದರೆ, ಕಿಡಿಗೇಡಿಗಳ ಕೃತ್ಯ ಇಷ್ಟಕ್ಕೆ ನಿಲ್ಲದೆ ನಮ್ಮ ಮೆಟ್ರೋ ರೈಲಿನ ಮೇಲೂ ಸಹ ಕಲ್ಲು ತೂರಾಟ ನಡೆಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಮೆಟ್ರೋ ರೈಲಿನ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ - ಸಿಲಿಕಾನ್ ಸಿಟಿ
ಚಲಿಸುತ್ತಿದ್ದ ನಮ್ಮ ಮೆಟ್ರೋ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ರೈಲಿನ ಗಾಜಿನ ಪರದೆ ಜಖಂ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಹೌದು, ಮೂರು ಬೋಗಿಯುಳ್ಳ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದು, ಪರಿಣಾಮ ರೈಲಿನ ಗಾಜಿನ ಪರದೆ ಜಖಂ ಆಗಿದೆ. ಶ್ರೀರಾಂಪುರ, ಮಂತ್ರಿ ಸ್ಕ್ವೈರ್ ಮತ್ತು ಸುರಂಗದಿಂದ ಹೊರ ಬರುತ್ತಿದ್ದಂತೆ ಹಲವೆಡೆ ಕಲ್ಲು ತೂರಾಟ ನಡೆಸಿದ್ದಾರೆ. ಪ್ರಯಾಣಿಕರನ್ನ ಹೊತ್ತೊಯ್ಯುವ ವೇಳೆ ಕಲ್ಲು ತೂರಿದ ಕಿಡಿಗೇಡಿಗಳ ಕೃತ್ಯದಿಂದ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.
ಹಾಗೇ ಮೆಟ್ರೋ ರೈಲು ಮಾರ್ಗದ ಮಧ್ಯೆ ಕಸದ ಬ್ಯಾಗ್ ಬಿಸಾಡುತ್ತಿದ್ದು, ರೈಲು ನಿಲ್ಲಿಸಿ ಬ್ಯಾಗ್ಗಳ ತೆರವುಗೊಳಿಸಿ ನಂತರ ರೈಲು ಓಡಿಸುವ ಪರಿಸ್ಥಿತಿ ಉಂಟಾಗಿದೆ. ಕಿಡಿಗೇಡಿಗಳ ಕೃತ್ಯದಿಂದ ನಮ್ಮ ಮೆಟ್ರೋ ಕಂಗೆಟ್ಟಿದ್ದು, ಈಗಾಲೇ ಲಕ್ಷಾಂತರ ರೂಪಾಯಿ ಹಾನಿ ಆಗಿದೆ. ಹಾಗಾಗಿ ನಮ್ಮ ಮೆಟ್ರೋ ಅಧಿಕಾರಿಗಳು ಈ ಕುರಿತಂತೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.