ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರು ತಮ್ಮ ಮನೆ ಮುಂದೆ ನಿಲ್ಲಿಸಿದ್ದ ದುಬಾರಿ ಬೆಲೆಯ ಎರಡು ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಕಿಡಿಗೇಡಿತನ ಮೆರೆದಿದ್ದಾರೆ. ಫಾರ್ಚೂನರ್ ಕಾರು ಸೇರಿದಂತೆ ಎರಡು ಕಾರುಗಳು ಬೆಂಕಿಗಾಹುತಿಯಾಗಿವೆ.
ತಡರಾತ್ರಿ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬೊಮ್ಮನಹಳ್ಳಿ ಪೊಲೀಸರು ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವನ್, ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) ಮುರುಗನ್ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ.
ಘಟನೆಯ ವಿವರ
ಎಂದಿನಂತೆ ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ಎರಡು ಕಾರುಗಳನ್ನು ಪಾರ್ಕ್ ಮಾಡಲಾಗಿತ್ತು. ಇದನ್ನು ಅರಿತಿದ್ದ ಕಿಡಿಗೇಡಿಗಳು ಮಧ್ಯರಾತ್ರಿ 1.30ರ ವೇಳೆಗೆ ಮನೆಯ ಹಿಂಬದಿ ಗೇಟ್ನಿಂದ ನಾಲ್ವರು ಒಳ ನುಗ್ಗಿದ್ದಾರೆ. ಸಿಸಿಟಿವಿ ಇರುವುದನ್ನು ಅರಿತಿದ್ದ ದುಷ್ಕರ್ಮಿಗಳು ಗೇಟ್ ಬಳಿಯ ಗಿಡಕ್ಕೆ ಒರಗಿ ಎಂಟ್ರಿ ಪಡೆದಿದ್ದಾರೆ. ಬಳಿಕ ಕಾರುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. 7 ನಿಮಿಷಗಳಲ್ಲಿ ಕೃತ್ಯ ಎಸಗಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸಿಸಿಟಿವಿಯಲ್ಲಿ ದುಷ್ಕರ್ಮಿಗಳು ಒಡಾಡೋದು ಸೆರೆಯಾಗಿದೆ. ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿರುವ ಪೊಲೀಸರು, ಪರಿಚಯಸ್ಥರೇ ಕೃತ್ಯ ಎಸಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ರಾಜಕೀಯ ದ್ವೇಷದಿಂದ ಘಟನೆ ನಡೆದಂತೆ ಕಾಣಿಸುತ್ತಿಲ್ಲ:
ಮನೆ ಮುಂಭಾಗದ ಪ್ರವೇಶದ್ವಾರದಲ್ಲಿ ಸೆಕ್ಯೂರಿಟಿ ಗಾರ್ಡ್ಗಳನ್ನು ನಿಯೋಜಿಸಲಾಗಿತ್ತು. ಭದ್ರತಾ ಸಿಬ್ಬಂದಿಯನ್ನು ಯಾಮಾರಿಸಿ ಹೋಗುವುದು ಕಷ್ಟಕರ ಎಂದು ತಿಳಿದುಕೊಂಡಿದ್ದ ಆರೋಪಿಗಳು ಬೈಕ್ನಲ್ಲಿ ಇಬ್ಬರಂತೆ ಬಂದಿರುವುದು ಗೊತ್ತಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಸತೀಶ್ ರೆಡ್ಡಿ, ತಡರಾತ್ರಿ 1.23ರ ಸುಮಾರಿಗೆ ಇಬ್ಬರು ಎಂಟ್ರಿಯಾಗಿದ್ದಾರೆ. ಕೇವಲ 7 ನಿಮಿಷಗಳಲ್ಲಿ ಕೃತ್ಯ ಎಸಗಿ ಹಿಂದಿನ ಗೇಟ್ನಿಂದ ಇಬ್ಬರು ಎಸ್ಕೇಪ್ ಆಗಿದ್ದಾರೆ. ಹಿಂದಿನ ಗೇಟ್ನಲ್ಲಿ ಸಿಸಿಟಿವಿ ಅಳವಡಿಸಿದ್ದರೂ ಅದರಲ್ಲಿ ಮುಖ ಸರಿಯಾಗಿ ಕಾಣಿಸುತ್ತಿಲ್ಲ. ಪೊಲೀಸ್, ವಾಚ್‌ಮನ್ ಇಬ್ಬರು ಮುಂದಿನ ಗೇಟಿನ ಬಳಿ ಗಸ್ತು ಕಾಯುತ್ತಿದ್ದರು. ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ನನಗೆ ಇಲ್ಲಿ ಯಾವುದೇ ರಾಜಕೀಯ ವೈಷ್ಯಮ ಇಲ್ಲ. ರಾಜಕೀಯ ದ್ವೇಷದ ಹಿನ್ನೆಲೆಯಿಂದ ಘಟನೆ ನಡೆದಿದೆ ಎಂದು ಅನಿಸುತ್ತಿಲ್ಲ. ಇದನ್ನ ರಾಜಕೀಯವಾಗಿ ತೆಗೆದುಕೊಳ್ಳುವುದನ್ನ ನಿರಾಕರಿಸುತ್ತೇನೆ. ಯಾರೋ ಒಂದು ದುರಾಲೋಚನೆಯ ಮೆಸೇಜ್ ಪಾಸ್ ಮಾಡಿದ್ದಾರೆ. ಯಾರ ಮನೆಯಲ್ಲಿ ಏನು ಬೇಕಾದರೂ ಮಾಡಬಹುದು ಎಂದು ತೋರಿಸೋಕೆ ಈ ಕೃತ್ಯ ಮಾಡಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.